Share this news

ಬೆಂಗಳೂರು:  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಮುಂದಿನ ಒಂದು ವರ್ಷದಲ್ಲಿ 5 ಸಾವಿರ ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಹಾಗೂ 13 ಸಾವಿರ ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯ ಮುಂಭಾಗ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್‌ ಲಿಮಿಟೆಡ್‌ ಬಿಎಂಟಿಸಿಗೆ ನೀಡಿರುವ ಮೊದಲ ಎಲೆಕ್ಟ್ರಿಕ್‌ ಪ್ರೋಟೊಟೈಪ್‌ ಬಸ್‌ಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆಯನ್ನು ಉತ್ತಮಗೊಳಿಸುವ ಸಲುವಾಗಿ ನಾಲ್ಕೂ ನಿಗಮಗಳಿಗೆ 5 ಸಾವಿರ ಬಸ್‌ಗಳನ್ನು ಖರೀದಿ ಮಾಡಲಾಗುವುದು. ಅದರಲ್ಲಿ ಬಿಎಂಟಿಸಿಗೆ ಹೊಸದಾಗಿ 1 ಸಾವಿರ ಎಲೆಕ್ಟ್ರಿಕ್‌ ಬಸ್‌ ಸೇರ್ಪಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

2013ರಿಂದ ಎಷ್ಟು ಬಸ್‌ಗಳು ಸ್ಕ್ರ್ಯಾಪ್‌ ಆಗಿವೆಯೋ ಅಷ್ಟುಬಸ್‌ಗಳನ್ನು ಹೊಸದಾಗಿ ಖರೀದಿಸಲಾಗುತ್ತಿದೆ. ಡಿಸೇಲ್‌ ವಾಹನಗಳಿಗೆ ಹೋಲಿಕೆ ಮಾಡಿದರೆ ಎಲೆಕ್ಟ್ರಿಕ್‌ ವಾಹನಗಳ ಖರ್ಚು ಕಡಿಮೆ. ಇದರಿಂದ ನಿಗಮಕ್ಕೂ ಹೆಚ್ಚಿನ ಲಾಭವಾಗಲಿದೆ. ಎಲೆಕ್ಟ್ರಿಕ್‌ ಬಸ್‌ ಪೂರೈಸುವ ಸಂಸ್ಥೆಯೇ ಆ ಬಸ್‌ಗಳ ಚಾಲಕರ ವೇತನ ಹಾಗೂ ಬಸ್‌ನ ನಿರ್ವಹಣಾ ವೆಚ್ಚ ಭರಿಸಲಿದೆ ಎಂದರು.

ಕೇಂದ್ರ ಸರ್ಕಾರದ ಫೇಮ್‌-2 ಯೋಜನೆಯಡಿ ಎಲೆಕ್ಟ್ರಿಕ್‌ ಹವಾನಿಯಂತ್ರಣ ರಹಿತ ಹೆಚ್ಚಿನ ಬಸ್ಸುಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. ಪ್ರಾಯೋಗಿಕವಾಗಿ ಟಾಟಾ ಕಂಪನಿಯವರು ಒಂದು ಬಸ್ಸನ್ನು ಹಸ್ತಾಂತರಿಸಿದ್ದಾರೆ. ಹಂತಹಂತವಾಗಿ ಬಿಎಂಟಿಸಿಗೆ 921 ಇವಿ ಬಸ್‌ಗಳು ಸೇರ್ಪಡೆಯಾಗಲಿದೆ. ಮುಂದಿನ ದಿನಗಳಲ್ಲಿ ನಾಲ್ಕು ನಿಗಮಗಳಲ್ಲಿಯೂ ಇವಿ ಬಸ್‌ಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

ನಿಗಮಗಳಲ್ಲಿ 2016ರ ನಂತರ ಸಿಬ್ಬಂದಿ ನೇಮಕಾತಿಯಾಗಿಲ್ಲ. ಹೀಗಾಗಿ ಹೊಸದಾಗಿ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮತಿ ಬಂದ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು. ಚಾಲಕ, ನಿರ್ವಾಹಕ ಮತ್ತು ಮೆಕ್ಯಾನಿಕ್‌ ಸೇರಿದಂತೆ 13 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.

 

Leave a Reply

Your email address will not be published. Required fields are marked *