ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದು ನೂತನ ಸರ್ಕಾರ ಆರಂಭವಾಗಿ ಅಧಿವೇಶನ ಶುರುವಾದರೂ ಬಿಜೆಪಿ ಅಧ್ಯಕ್ಷರ ನೇಮಕ ಮಾತ್ರ ಇನ್ನೂ ಬಾಕಿಯಾಗಿ ಉಳಿದಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಅಧ್ಯಕ್ಷ ಆಯ್ಕೆ ಬಗ್ಗೆ ತಲೆಕೆಡಿಸಿಕೊಂಡಿದೆ. ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರವಧಿ ಮುಗಿದಿದ್ದು ನೂತನ ಅಧ್ಯಕ್ಷರ ಸ್ಥಾನಕ್ಕೆ ಹಲವು ನಾಯಕರ ಹೆಸರುಗಳು ಕೇಳಿ ಬಂದಿವೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಂಸದೆ ಶೋಭಾ ಕರಂದ್ಲಾಜೆ ಅವರ ಹೆಸರನ್ನು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ಜರ್ಜರಿತವಾಗಿರುವ ಕರ್ನಾಟಕ ಬಿಜೆಪಿ ಪಡೆ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದು ಅಧಿವೇಶನವೇ ಆರಂಭವಾದರೂ ವಿಪಕ್ಷ ನಾಯಕನಿಲ್ಲದೇ ಕರ್ನಾಟಕ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದೆ. ಇದಲ್ಲದೆ ರಾಜ್ಯಾಧ್ಯಕ್ಷ ಸ್ಥಾನವೂ ಖಾಲಿ ಉಳಿದಿದ್ದು, ಅದು ಕೂಡ ಆಗಬೇಕಿದೆ. ಈ ಎರಡು ನೇಮಕಾತಿಗೆ ಬಣ ರಾಜಕೀಯ ಹಿಂದೆ ಕೆಲಸ ಮಾಡುತ್ತಿದ್ದು, ಯಾರನ್ನು ಆಯ್ಕೆ ಮಾಡಬೇಕು ಎಂದು ಹೈಕಮಾಂಡ್ ಗೊಂದಲಕ್ಕೆ ಬಿದ್ದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವಾರು ಹಿರಿಯ ನಾಯಕರ ಹೆಸರುಗಳು ಕೇಳಿಬಂದಿವೆ. ಅವುಗಳಲ್ಲಿ ಆರ್, ಅಶೋಕ್, ಬಸವರಾಜ ಬೊಮ್ಮಾಯಿ, ಸಿಟಿ ರವಿ, ಶೋಭಾ ಕರಂದ್ಲಾಕೆ, ಬಸನಗೌಡ ಪಾಟೀಲ್ ಯತ್ನಾಳ್, ಬಿವೈ ವಿಜಯೇಂದ್ರ, ವಿ ಸೋಮಣ್ಣ, ಮಾಜಿ ಸಚಿವ ಸುನೀಲ್ ಕುಮಾರ್ ಹೀಗೆ ಕೆಲವರ ಹೆಸರು ಮುಂಚೂಣಿಯಲ್ಲಿವೆ.
ಆದರೆ ಬಿಎಸ್ ಯಡಿಯೂರಪ್ಪನವರು ಮಹಿಳೆಯರಿಗೆ ಈ ಬಾರಿ ಅವಕಾಶ ನೀಡಬೇಕು. ಅಲ್ಲದೆ ಕರ್ನಾಟಕ ವಿರೋಧ ಪಕ್ಷದ ನಾಯಕನಾಗಿ ಲಿಂಗಾಯತರಿಗೆ ಕೊಟ್ಟರೆ ರಾಜ್ಯಾಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸುವಂತೆ ಬಿಎಸ್ ಯಡಿಯೂರಪ್ಪ ಅವರು ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೋಭಾ ಕರಂದ್ಲಾಜೆ ಅವರು ಸರ್ಕಾರದ ಮೇಲೆ ಹೆಚ್ಚಿನ ಹಿಡಿತ ಸಾಧಿಸಿದ್ದರು. ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಯಡಿಯೂರಪ್ಪ ಅವರ ಕುಟುಂಬದವರು ಮಧ್ಯ ಪ್ರವೇಶಿಸಿ, ಶೋಭಾ ಕರಂದ್ಲಾಜೆ ಅವರನ್ನು ಸರ್ಕಾರದಿಂದ ದೂರ ಇರಿಸಿದ್ದರು. ಇತ್ತೀಚೆಗೆ ಯಡಿಯೂರಪ್ಪ, ವಿಜಯೇಂದ್ರ ಮತ್ತು ಶೋಭಾ ಮಧ್ಯೆ ಸಂಧಾನ ನಡೆದಿದ್ದು, ಎಲ್ಲರೂ ಒಟ್ಟಾಗಿ ಹೋಗುವ ನಿರ್ಧಾರಕ್ಕೆ ಬರಲಾಗಿದೆ. ಲೋಕಸಭಾ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆ ಹಾಗೂ ಕಾಂಗ್ರೆಸ್ ಸರ್ಕಾರವನ್ನ ಎದುರಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆಗೆ ಮುಂದಾಗಿದೆ.
ಸದ್ಯಕ್ಕೆ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಅವರ ಅವಧಿ ಮುಗಿದಿದೆ. ಅಲ್ಲದೆ ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತಿರುವ ಕಟೀಲ್ ಅವರು ಸಹ ಜವಾಬ್ದಾರಿಯಿಂದ ಕಳಚಿಕೊಳ್ಳಲು ರೆಡಿಯಾಗಿದ್ದಾರೆ. ಇತ್ತ ರಾಜ್ಯಾಧ್ಯಕ್ಷ ಕಟೀಲ್ ವಿರುದ್ದ ಹಲವು ಬಿಜೆಪಿಯ ನಾಯಕರೇ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಸೈಡ್‌ಲೈನ್ ಮಾಡಿದ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ ಎಂಬ ಕಾರಣಕ್ಕಾಗಿ ಈಗ ಅವರ ಪುತ್ರ ವಿಜಯೇಂದ್ರ ಹೆಸರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂದು ಪ್ರಬಲ ಒತ್ತಾಯ ಕೂಡಾ ಕೇಳಿ ಬರುತ್ತಿದೆ. ಪ್ರತಿ ಬಾರಿಯೂ ಬಿಜೆಪಿಯಲ್ಲಿ ಜಾತಿ ರಾಜಕಾರಣವೂ ಮುಖ್ಯವಾಗುತ್ತದೆ. ಈ ಬಾರಿಯೂ ಸಹ ಪ್ರಬಲ ಸಮುದಾಯ ಲಿಂಗಾಯತರಿಗೆ ಒಂದು ಹುದ್ದೆಯನ್ನು ನೀಡಿ, ಇನ್ನೊಂದು ಹುದ್ದೆಯನ್ನು ಒಕ್ಕಲಿಗರಿಗೆ ನೀಡುವ ಚಿಂತನೆ ನಡೆದಿದೆ. ರಾಜ್ಯದಲ್ಲಿ ನಾಲ್ಕು ಜನ ಕೇಂದ್ರ ಸಚಿವರಿದ್ದು, ಆ ಪೈಕಿ ಒಕ್ಕಲಿಗ ಸಮುದಾಯದ ಮಹಿಳಾ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.