ಕುಷ್ಟಗಿ: ಬಿಜೆಪಿಯಲ್ಲಿ ಎಲ್ಲರೂ ಅತೃಪ್ತರೇ, ನಮ್ಮ ಪಕ್ಷ 136 ಸೀಟು ಪಡೆದು ಸರ್ಕಾರ ರಚನೆ ಮಾಡಿದೆ. ಬಿಜೆಪಿಯವರಿಗೆ ತಾಕತ್ತು, ಧಮ್ ಇದ್ದರೆ 40 ಅಲ್ಲ, 4 ಶಾಸಕರನ್ನು ಕೆರೆದುಕೊಂಡು ಹೋಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬರೋದಾದ್ರೆ ಬರುವರಿಗೆ ಬೇಡ ಅನ್ನೋದಿಲ್ಲ. ಯಾರೇ ಬಂದರೂ ಸ್ವಾಗತಿಸುತ್ತೇವೆ ಎಂದರು.ಲೋಕಸಭೆಯ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಅದು ಅಪವಿತ್ರ ಮೈತ್ರಿ . ಜ್ಯಾತ್ಯತೀತ ಜನತಾದಳ ಎಂದು ಇರೋದನ್ನು ಕೋಮವಾದಿ ಜನತಾದಳ ಎಂದು ಬದಲಾಯಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಸಚಿವ ಡಿ.ಸುಧಾಕರ ವಿರುದ್ಧ ಎಫ್‌ಐಆರ್ ಕುರಿತ ಪ್ರಶ್ನೆಗೆ, ತಪ್ಪು ಮಾಡಿದವರಿಗೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಡಿಸಿಎಂ ಮಾಹಿತಿ ಪಡೆದುಕೊಂಡಿರುತ್ತಾರೆ. ಅಧಿಕಾರ ನಮ್ಮ ಕೈಯಲ್ಲಿ ಇದೆ ಎಂದು ಏನೇನೋ ಮಾಡಲು ಆಗಲ್ಲ, ಮಂತ್ರಿಯಾಗಿರುವುದರಿಂದ ಸುದ್ದಿ ಆಗಬಹುದು ಎಂದು ಕೇಸ್ ಮಾಡಿರಬಹುದು, ವಿರೋಧ ಪಕ್ಷದವರ ಒತ್ತಡದಿಂದ ಕೇಸ್ ಆಗಿರಬಹುದು. ನಮ್ಮ ಸರ್ಕಾರ ದಲಿತರ ಮೇಲೆ ದೌರ್ಜನ್ಯ ಆಗಲು ಬಿಡುವುದಿಲ್ಲ. ಕಾನೂನು ಬಹಳ ಗಟ್ಟಿಯಾಗಿವೆ. ಅದಕ್ಕೆಲ್ಲ ಅವಕಾಶ ಇರುವುದಿಲ್ಲ, ಅವರ ಮೇಲೆ ಯಾಕೆ ಹೀಗಾಗಿದೆ ಎಂದು ತಿಳಿದುಕೊಳ್ಳುತ್ತೇವೆ ಎಂದರು.