ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಯವರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಚೈತ್ರ ಕುಂದಾಪುರ ಮತ್ತು ಹಾಲಶ್ರೀ ಶ್ರೀಗಳ ಪ್ರಕರಣ ಇಡೀ ರಾಜ್ಯದ್ಯಂತ ಬಾರಿ ಸದ್ದು ಮಾಡಿರುವ ಈ ಬೆನ್ನಲ್ಲೇ ಇದೀಗ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರದಲ್ಲಿ ಕೂಡ ಕೋಟಿಗಟ್ಟಲೆ ವಂಚನೆ ನಡೆದಿದೆ ಎನ್ನುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣದ ಕುರಿತು ಬಂಧಿತ ಆರೋಪಿ ರೇವಣಸಿದ್ಧಪ್ಪ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಶ್ರೀ ರಾಮುಲು ಅವರಿಗೂ ನಾನೇ ಟಿಕೆಟ್ ಕೊಡಿಸಿರುವುದಾಗಿ ಪೊಲೀಸರ ಮುಂದೆ ಬಾಯಿಬಿಟ್ಟಿದ್ದು ಈ ಪ್ರಕರಣ ಭಾರೀ ಕುತೂಹಲಕ್ಕೆ ಎಡೆಮಾಡಿದೆ.
ವಿಜಯಜನರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸೋದಾಗಿ ಹಣ ವಂಚಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿ ರೇವಣಸಿದ್ಧಪ್ಪನನ್ನು ತೀವೃ ವಿಚಾರಣೆ ನಡೆಸುತ್ತಿದ್ದಾರೆ, ಇದೇವೇಳೆ ಬಿಜೆಪಿಯಲ್ಲಿ ತಾನು ಪ್ರಬಲನಾಗಿದ್ದು, ಮಾಜಿ ಮುಖ್ಯಮಂತ್ರಿಗೂ ನಾನೇ ಟಿಕೆಟ್ ಕೊಡಿಸಿದ್ದು ಎಂದು ಆರೋಪಿ ರೇವಣಸಿದ್ದಪ್ಪ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.ರಾಜ್ಯದಲ್ಲಿ 2013 ಹಾಗೂ 2018ರ ವಿಧಾನಸಭಾ ಚುನಾವಣೆಯ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲುಗೆ ತಾನೇ ಟಿಕೆಟ್ ಕೊಡಿಸಿದ್ದಾಗಿ ಹೇಳಿಕೊಂಡಿದ್ದಾನೆ. ಇದನ್ನು ನಂಬಿದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ಕೋಟ್ಯಂತರ ಹಣ ಕೊಟ್ಟು ಟಿಕೆಟ್ ಸಿಗದೇ ವಂಚನೆಗೊಳಗಾಗಿದ್ದಾರೆ.
ಟಿಕೆಟ್ ವಂಚನೆಗೆ ಒಳಗಾಗಿರುವ ಶಿವಮೂರ್ತಿ ಪ್ರತಿಕ್ರಿಯಿಸಿ ಗಣ್ಯರಿಗೆ ಟಿಕೆಟ್ ಕೊಡಿಸಿರುವುದಾಗಿ ಹೇಳಿದ್ದರಿಂದ ನನಗೂ ಟಿಕೆಟ್ ಸಿಗುತ್ತದೆ, ಇವರು ಇದೇ ಕೆಲಸ ಮಾಡುತ್ತಾರೆ, ಮುಂದೆ ನನಗೆ ಕೂಡ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದು ನಂಬಿ ಹಣವನ್ನು ಕೊಟ್ಟೆ. ಆದರೆ ನಂತರದಲ್ಲಿ ಟಿಕೆಟ್ ನನಗೆ ಕೈ ತಪ್ಪಿದಾಗ ಹಣವನ್ನು ಮರಳಿ ಕೇಳಿದೆ. ಈ ಸಂದರ್ಭದಲ್ಲಿ ಅವರು ನನಗೆ ಜೀವ ಬೆದರಿಕೆ ಹಾಕಿದ್ದರು. ಆದರೆ ನಾನು ಕೂಡ ಒತ್ತಡವನ್ನು ಹಾಕಿದಾಗ ಅವರು ಬೇರೆ ಬೇರೆ ಚೆಕ್ಕುಗಳನ್ನು ಕೊಟ್ಟರು. ಆದರೆ ಅವರು ಕೊಟ್ಟ ಎಲ್ಲ ಚೆಕ್ ಗಳು ಬೌನ್ಸ್ ಆಗಿದೆ ಎಂದು ಅವಲತ್ತುಕೊಂಡಿದ್ದಾರೆ