ಮೈಸೂರು : ಬಿಜೆಪಿಯ ಕೆಲ ಅತಿರಥ- ಮಹಾರಥ ನಾಯಕರ ಜೊತೆ ಸಿಎಂ ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಲ್ಲ. ಆದರೆ ಬಿಜೆಪಿಯ ಕೆಲ ಅತಿರಥ-ಮಹಾರಥ ನಾಯಕರು ಸಿಎಂ ಸಿದ್ದರಾಮಯ್ಯ ಜೊತೆಗೆ ಶಾಮೀಲಾಗಿದ್ದಾರೆ. ನನಗೆ ತುರಿಕೆ ಆದ್ರೆ ನೀನು ಕೆರೆ, ನಿನಗೆ ತುರಿಕೆ ಆದ್ರೆ ನಾನು ಕೆರೆಯುತ್ತೇನೆ ಅನ್ನುವ ರೀತಿಯಲ್ಲಿ ನಮ್ಮ ಬಿಜೆಪಿ ನಾಯಕರು ಸಿದ್ದರಾಮಯ್ಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಸ್ವಪಕ್ಷಿಯರ ವಿರುದ್ಧವೇ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಬಿಜೆಪಿ ಮೇಲೆ ಪಿಎಸ್‌ಐ ಹಗರಣ, ಬಿಟ್ ಕಾಯಿನ್ ಎಂದು ಅಬ್ಬರಿಸುತ್ತಿದ್ದರು. ಈಗ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಿದ್ದರಾಮಯ್ಯ ಅವರೆ ನಿಮ್ಮ ಮತ್ತು ಬಿಜೆಪಿಯ ಕೆಲ ನಾಯಕರ ಜೊತೆ ಹೊಂದಾಣಿಕೆ ಇಲ್ಲವೆಂದರೆ ನೀವು ಮಾಡುತ್ತಿದ್ದ ಆರೋಪಗಳ ಬಗ್ಗೆ ತನಿಖೆಗೆ ಆದೇಶ ಮಾಡಿ ಎಂದು ಸವಾಲೆಸೆದರು.

ಎಷ್ಟೇ ಕಷ್ಟವಾದ್ರೂ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೀರಾ ಮೊದಲು ಹೇಳಿ. ಸುಲಿಗೆ ಮಾಡಿ ಯೋಜನೆ ಜಾರಿ ಮಾಡುವುದು ಕೈ ಸಂಸ್ಕೃತಿನಾ ಎಂದು ಪ್ರಶ್ನಿಸಿದ್ದಾರೆ. ಸಿಎಂ, ಡಿಸಿಎಂ ಹಾಗೂ ಎಂ.ಬಿ.ಪಾಟೀಲ್ ಆಸ್ತಿ ಮಾರಿ ಗ್ಯಾರಂಟಿ ಯೋಜನೆ ಜಾರಿಗೆ ತರ್ತಾರಾ ಎಂದು ಕಿಡಿಕಾರಿದ್ದಾರೆ.

