ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರನಿಗೆ ಭರ್ಜರಿ ದೀಪಾವಳಿ ಗಿಫ್ಟ್ ಸಿಕ್ಕಿದೆ. ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮುನ್ನ ಅವರು ಬಿಜೆಪಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಳಿಕ,ನಳಿನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಭಾರೀ ಕುತೂಹಲಗಳಿದ್ದವು. ಲಿಂಗಾಯತ ಸಮುದಾಯ ಪಕ್ಷಕ್ಕೆ ನೀಡಿದ ಬೆಂಬಲವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ, ಯುವ ಮೋರ್ಚಾದಲ್ಲಿಯೂ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದ್ದ ವಿಜಯೇಂದ್ರ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ. ಈ ನಿರ್ಧಾರದೊಂದಿಗೆ ಚುನಾವಣೆ ಬಳಿಕ ಬಿಜೆಪಿಯ ಎದುರಿಗಿದ್ದ ಎರಡು ಪ್ರಶ್ನೆಗಳ ಪೈಕಿ ಒಂದು ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಇನ್ನು ವಿಪಕ್ಷ ನಾಯಕ ಯಾರಾಗಲಿದ್ದಾರೆ ಎನ್ನುವ ಕುತೂಹಲ ಉಳಿದುಕೊಂಡಿದೆ.
ಕರ್ನಾಟಕದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ವೇಳೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಶಾಕ್ ನೀಡಬೇಕಾದಲ್ಲಿ ದೊಡ್ಡ ಸಮುದಾಯದ ನಾಯಕರೊಬ್ಬರ ನೇತೃತ್ವದ ಬಿಜೆಪಿಗೆ ಅನಿವಾರ್ಯವಾಗಿತ್ತು. ಚುನಾವಣೆ ಬಳಿಕ ಬಿಜೆಪಿ ಬಹುತೇಕ ಶೂನ್ಯ ನಾಯಕತ್ವದಲ್ಲಿತ್ತು. ಸಾಕಷ್ಟು ಚರ್ಚೆಗಳ ಬಳಿಕ ಅಳೆದು ತೂಗಿ ರಾಷ್ಟ್ರೀಯ ಬಿಜೆಪಿ ಯುವ ನಾಯಕ ಬಿವೈ ವಿಜಯೇಂದ್ರ ಅವರಿಗೆ ರಾಜ್ಯದ ಬಿಜೆಪಿಯ ನಾಯಕತ್ವದ ಹೊರೆ ನೀಡಿದೆ. 2020 ರಿಂದ ಕರ್ನಾಟಕದ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಜನತಾ ಯುವ ಮೋರ್ಚಾದ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ವೃತ್ತಿಯಿಂದ ವಕೀಲರಾಗಿರುವ ಬಿವೈ ವಿಜಯೇಂದ್ರ, ಅವರ ಸಹೋದರ ಬಿ.ವೈ.ರಾಘವೇಂದ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ.
ಈ ನೇಮಕಾತಿಯಿಂದ ಕಳೆದ ಹಲವು ತಿಂಗಳಿನಿಂದ ಭಾರೀ ಚರ್ಚೆಯಲ್ಲಿದ್ದ ರಾಜ್ಯಾಧ್ಯಕ್ಷ ಸ್ಥಾನ ದ ಆಯ್ಕೆ ಗೊಂದಲಕ್ಕೆ ತೆರೆಬಿದ್ದಿದೆ