ಕಾರ್ಕಳ:ನಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಬಂಡಾಯವಾಗಿ ಸ್ಪರ್ಧಿಸಿ ಅಧಿಕೃತ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿರುವ ಅಧ್ಯಕ್ಷ ಅಶೋಕ್ ಪೂಜಾರಿ ತಾನು ಬಂಡಾಯ ಅಭ್ಯರ್ಥಿಯಲ್ಲ ಬಿಜೆಪಿಯ ತತ್ವ ಸಿದ್ದಾಂತಗಳಿಗೆ ಬದ್ದ ಎನ್ನುವ ಮೂಲಕ ಯೂಟರ್ನ್ ಹೊಡೆದಿದ್ದಾರೆ.
2004 ರಿಂದ ಪಕ್ಷದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿ ಕೆಲಸ ನಿರ್ವಹಿಸಿ ನಿರಂತರ ಜನ ಸಂಪರ್ಕದೊಂದಿಗೆ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿಕೊಂಡಿದ್ದು, ಈ ಬಾರಿ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ನಾನು ಸ್ಪರ್ಧಿಸಲು ಇಚ್ಚಿಸಿ ಎಲ್ಲರ ಆರ್ಶೀವಾದದಿಂದ ಪಂಚಾಯತ್ ಅಧ್ಯಕ್ಷನಾಗಿ ಆಯ್ಕೆಯಾಗಿರುತ್ತೇನೆ. ನಾನು ಬಂಡಾಯ ಅಭ್ಯರ್ಥಿ ಅಲ್ಲ. ಅಲ್ಲದೆ ಪಕ್ಷದ ವಿರುದ್ಧವಾಗಿ ನನ್ನ ಯಾವುದೇ ಚಟುವಟಿಕೆಗಳಿಲ್ಲ. ನಾನು ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯರ ಮತಗಳಿಂದ ಆಯ್ಕೆಯಾಗಿದ್ದೇ ಹೊರತು ಯಾವುದೇ ಇತರ ಪಕ್ಷಗಳ ಸಹಕಾರದಿಂದ ಆಯ್ಕೆಯಾಗಿಲ್ಲ, ಪಕ್ಷದ ಹಿರಿಯರೆಲ್ಲರ ಸಹಕಾರದಿಂದ ನಾನು ಇಲ್ಲಿಯವರೆಗೆ ಪಕ್ಷದಲ್ಲಿ ಗುರುತಿಸಿಕೊಂಡು ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ.
ಇನ್ನೂ ಮುಂದೆಯೂ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ನನಗೆ ನೀಡಿದ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಲ್ಲೂರು ಗ್ರಾಮ ಪಂಚಾಯತ್ನ ಎಲ್ಲಾ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶಾಸಕರ ಸಹಕಾರದೊಂದಿಗೆ ನಲ್ಲೂರು ಗ್ರಾಮವನ್ನು ಸಮಗ್ರ ಅಭಿವೃದ್ಧಿಯತ್ತ ಮುನ್ನಡೆಸುವುದಾಗಿ ಅಶೋಕ್ ಪೂಜಾರಿ ಹೇಳಿದ್ದಾರೆ.




.


