ಬೆಂಗಳೂರು: ರಾಜ್ಯ ಸರ್ಕಾರ ಬಿಟ್ ಕಾಯಿನ್ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ ಬಳಿಕ ತನಿಖೆ ತೀವ್ರಗೊಂಡಿದೆ. ಈ ಬೆನ್ನಲ್ಲೇ ಹಗರಣದ ಆರೋಪಿ ಶ್ರೀಕಿ ರಾಜಕಾರಣಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ನಡುಕ ಹುಟ್ಟಿಸುವಂತೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಸಿಐಡಿ ಎಸ್‌ಐಟಿ ತಂಡ ಆರೋಪಿಗಳ ಬೇಟೆ ಆರಂಭಿಸಿದ ಬೆನ್ನಲ್ಲೇ, ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ಆಲಿಯಾಸ್ ಶ್ರೀಕೃಷ್ಣ ಕೇಂದ್ರ ಗೃಹ ಇಲಾಖೆಗೆ ಆನ್ ಲೈನ್ ನಲ್ಲೇ ದೂರು ಕೊಡುವ ಮೂಲಕ ಹಗರಣದಲ್ಲಿ ಕಾಂಗ್ರೆಸ್ ನ ಕೆಲ ನಾಯಕರು, ಅವರ ಮಕ್ಕಳು ಹಾಗೂ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಮೊದಲು ಸಿಸಿಬಿ ಪೊಲೀಸರ ವಶದಲ್ಲಿರುವ ಶ್ರೀಕಿ ಲ್ಯಾಪ್ ಟಾಪ್ ನಲ್ಲಿರುವ ಮಾಹಿತಿಯನ್ನು ಹಲವು ಬಾರಿ ತಿರುಚಲಾಗಿದೆ ಎಂಬುದಾಗಿ ವಿಧಿವಿಜ್ಞಾನ ಪ್ರಯೋಗಾಲಯ ವರದಿ ಕೊಟ್ಟಿತ್ತು. ಈ ವಿಚಾರವನ್ನು ಸರ್ಕಾರದ ಪರ ವಕೀಲರು ಈಗಾಗಲೇ ಹೈಕೋರ್ಟ್ ಗಮನಕ್ಕೂ ತಂದಿದ್ದಾರೆ.
ಈ ಬೆನ್ನಲ್ಲೇ ಶ್ರೀಕಿ ಕೊಟ್ಟಿದ್ದಾರೆ ಎನ್ನಲಾದ ದೂರು ರಾಜಕೀಯ ಹಾಗೂ ಪೊಲೀಸ್ ವಲಯದಲ್ಲಿ ಹೊಸ ಸಂಚಲನ ಸೃಷ್ಠಿಸಿದೆ.ಸದ್ಯ ಶ್ರೀಕಿಯ ದೂರು ಡಿಜಿಪಿ ಪೊಲೀಸರ ಮೂಲಕ ಎಸ್‌ಐಟಿಗೆ ತಲುಪಿದ್ದು, ಅದರ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂಬುದಾಗಿ ಉನ್ನತ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಕರ್ನಾಟಕದ ಹಲವಾರು ಕಾಂಗ್ರೆಸ್ ರಾಜಕಾರಣಿಗಳು ಮತ್ತು ಅವರ ಮಕ್ಕಳು ನನ್ನನ್ನು ಅವರ ಇಚ್ಛೆಯ ಮೇರೆಗೆ ಕೆಲಸಗಳನ್ನು ಮಾಡಿಸಿದ್ದಾರೆ. ಈಗ ನಾನು ನನ್ನದಲ್ಲದ ತಪ್ಪಿಗೆ ರಾಜಕೀಯ ಅವ್ಯವಸ್ಥೆಗೆ ಸಿಲುಕಿದ್ದೇನೆ. ಭ್ರಷ್ಟ ಐಪಿಎಸ್ ಅಧಿಕಾರಿಯೊಬ್ಬರು ನನ್ನನ್ನು ಮೊದಲು ನ.14, 2020ರಂದು ಅಪಹರಿಸಿ, ನಂತರ ನ.17ಕ್ಕೆ ಅಧಿಕೃತವಾಗಿ ಬಂಧನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತದನಂತರ ಒಂದರ ಮೇಲೊಂದು ಕೇಸ್ ಗಳನ್ನು ನನ್ನ ಮೇಲೆ ದಾಖಲಿಸಿದ್ದಾರೆ. 100 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದೆ. ಈ ಅವಧಿಯಲ್ಲಿ ಹಲವಾರು ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವಂತೆ ಪೊಲೀಸರು ಕಿರುಕುಳ ಕೊಟ್ಟರು ಎಂದು ಹೇಳಿದ್ದಾರೆ.
ಹಲವಾರು ಕಾಂಗ್ರೆಸ್ ನಾಯಕರು ಹ್ಯಾಕಿಂಗ್ ಸಂಬಂಧಿತ ಕಾನೂನು ಬಾಹಿರ ಕೆಲಸಗಳನ್ನು ಮಾಡುವಂತೆ ಒತ್ತಡ ಹೇರಿದ್ದರು. ನಾನು ನನಗಾಗಿ 1 ರೂಪಾಯಿ ಸಹ ಮಾಡಿಲ್ಲ. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ಶ್ರೀಕಿ ದೂರಿನಲ್ಲಿ ಮನವಿ ಮಾಡಿದ್ದಾರೆ.