ಉಡುಪಿ: ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯನ್ನು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿನ 6,7 ಹಾಯ 11ನೇ ತಿರುವಿನಲ್ಲಿ ಹಲವೆಡೆ ಸಣ್ಣಪುಟ್ಟ ಬಿರುಕುಗಳು ಹಾಗೂ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜುಲೈ 27ರಿಂದ ಸೆಪ್ಟೆಂಬರ್ 15ರವರೆಗೆ ಸರಕು ಸಾಗಾಟ ವಾಹನಗಳು ಸೇರಿದಂತೆ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನೀಡಿರುವ ಸೂಚನೆಯ ಪ್ರಕಾರ ಸುರಕ್ಷತೆಯ ದೃಷ್ಟಿಯಿಂದ ಘನ ವಾಹನಗಳಿಗೆ ಬದಲಿ ಸಂಚಾರ ಮಾರ್ಗವನ್ನು ಕಲ್ಪಿಸಲಾಗಿದೆ.
ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುವ ಘನ ವಾಹನಗಳು ಕಾರ್ಕಳ, ಎಸ್ ಕೆ ಬಾರ್ಡರ್ ಮೂಲಕ ಆಗುಂಬೆ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳಬಹುದು ಅಲ್ಲದೇ ಉಡುಪಿಯಿಂದ ತೆರಳುವ ಘನ ವಾಹನಗಳು ಮಾಸ್ತಿಕಟ್ಟೆ, ಸಿದ್ದಾಪುರ ಮಾರ್ಗವಾಗಿ ಹುಲಿಕಲ್ ಘಾಟ್ ಮೂಲಕ ಶಿವಮೊಗ್ಗಕ್ಕೆ ತೆರಳಬಹುದೆಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಬಸ್, ಬೈಕ್ ಕಾರು ಸೇರಿದಂತೆ ಪ್ರಯಾಣಿಕರ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ.