Share this news

ಬೆಂಗಳೂರು: ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಡೆಯ ಕುರಿತು ರಾಜ್ಯ ಹೈಕೋರ್ಟ್ ತೀವೃ ಅಸಮಾಧಾನ ವ್ಯಕ್ತಪಡಿಸಿದೆ. ಈ ಸರ್ಕಾರದ ವರದಿ ಪ್ರಕಾರ ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು? ಬಾಕಿ ಹಣ ಬಿಡುಗಡೆ ಮಾಡುವುದರಲ್ಲಿಯೇ ಹಿರಿತನವನ್ನು ಏಕೆ ಅನುಸರಿಸಬೇಕು? ಎಂದು ಸರ್ಕಾರದ ವಿರುದ್ಧ ಚಾಟಿ ಬೀಸಿದೆ.

ಗುತ್ತಿಗೆ ಹಣ ಬಾಕಿ ಪಾವತಿ ಮಾಡುವ ಕುರಿತಂತೆ ಹೈಕೋರ್ಟ್‌ ಆದೇಶ ಪಾಲಿಸದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ।ಪಿ.ಬಿ.ವರಾಳೆ ಹಾಗೂ ನ್ಯಾ। ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.ವಿಚಾರಣೆಗೆ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರಿಗೆ, ಕೆಲವು ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆ ಟೆಂಡರ್ ಕರೆದು, ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಹಣ ಪಾವತಿಗೆ ಷರತ್ತುಗಳನ್ನು ಒಡ್ಡುವುದು ಹಾಗೂ ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಗುತ್ತಿಗೆದಾರರನ್ನು ಮೂಲೆಗುಂಪು ಮಾಡಿ ಬಾಕಿ ಪಾವತಿಗೆ ಬಿಬಿಎಂಪಿ ಹಾಗೂ ಸರ್ಕಾರ ಅನುಸರಿಸುತ್ತಿರುವ ವಿಧಾನವೇ ನ್ಯಾಯಾಲಯಕ್ಕೆ ತಿಳಿಯುತ್ತಿಲ್ಲ. ನಿಮ್ಮ ಬಳಿ ಹಣವಿಲ್ಲವೆ? ಹಣ ಇಲ್ಲವಾದರೆ ಹೇಳಿ ಬಿಡಿ. ಬಾಕಿ ಪಾವತಿಯಲ್ಲೂ ಹಿರಿತನ ಅನುಸರಿಸುವುದಕ್ಕೆ ನಿಮ್ಮ ಬಳಿ ಮಾರ್ಗಸೂಚಿ ಇದೆಯೇ? ಹಿರಿತನ ಏಕೆ ಎಂಬ ಬಗ್ಗೆ ಉತ್ತರಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ಪ್ರಶ್ನಿಸಿತು.

ಅರ್ಜಿದಾರರು ಗುತ್ತಿಗೆ ಪಡೆದ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಕೆಲಸವನ್ನು ಮಧ್ಯದಲ್ಲಿಯೇ ಕೈಬಿಟ್ಟಿದ್ದಾರೆ ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಸಾಕಷ್ಟು ಸಮಯ ಕಳೆದ ನಂತರ ಅರ್ಜಿದಾರರು ಬಾಕಿ ಹಣಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯ 2023ರ ಅ.30ರ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರೂ ಬಾಕಿ ಪಾವತಿಗೆ ಹಿಂದೆ-ಮುಂದೆ ನೋಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಕಚೇರಿಗೆ ಕಚೇರಿಗೆ ಅಲೆದಾಡಿಸುವುದು ಸರಿಯೇ? ಎಂದು ನ್ಯಾಯಪೀಠ ಕೇಳಿತು.

ಸರ್ಕಾರಿ ವಕೀಲರು ಕೆಲವು ನಕಲಿ ಬಿಲ್ ವಿಚಾರ ಪ್ರಸ್ತಾಪಿಸಿದಾಗ ನ್ಯಾಯಾಲಯ, ಅದಕ್ಕೂ ಈ ಅರ್ಜಿದಾರರಿಗೂ ಸಂಬಂಧವಿಲ್ಲ. ಒಂದು ವೇಳೆ ನೀವು ಸ್ವಚ್ಛಗೊಳಿಸುವ ಕಾರ್ಯಾಚರಣೆ ಆರಂಭಿಸಿದರೆ ಅದನ್ನು ಮೊದಲು ನಿಮ್ಮ ಮನೆಯಿಂದ ಆರಂಭಿಸಿ. ನೀವು ನಿಮ್ಮ ಅಧಿಕಾರಿಗಳ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದೀರಾ? ಹಾಗಿದ್ದರೆ ಹೇಳಿ, ರಾಜ್ಯ ಸರ್ಕಾರ ಸ್ವಲ್ಪ ವಿವೇಚನೆಯಿಂದ ಬದ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನ್ಯಾಯಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ

Leave a Reply

Your email address will not be published. Required fields are marked *