Share this news

ಮಂಗಳೂರು: ರಾಜಧಾನಿ ಮಳೆಯಿಂದ ಬೇಸತ್ತಿದ್ದರೆ, ಇತ್ತ  ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಾಗಿದೆ. ಅದರಂತೆ ಬಿಸಿಲಿನ ತಾಪಕ್ಕೆ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಜಿಲ್ಲೆಯ ಜೀವ ನದಿ ನೇತ್ರಾವತಿಯು ತನ್ನ ಹರಿವನ್ನ ನಿಲ್ಲಿಸಿದ್ದಾಳೆ. ಮಳೆ ಬಾರದಿರುವ ಕಾರಣ ನೇತ್ರಾವತಿ ನದಿ ಬತ್ತಿರುವ ಕಾರಣ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ.

ಸದ್ಯ ಎರಡು ದಿನಕ್ಕೊಮ್ಮೆ ತುಂಬೆ ಡ್ಯಾಂನಿಂದ ನೀರು ಮಂಗಳೂರು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಇನ್ನು ಗ್ರಾಮಾಂತರ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಕಟ್ಟಡ ಕಾಮಗಾರಿಗಳಿಗೆ ನೀರು ಬಳಸದಂತೆ ಜಿಲ್ಲಾಡಳಿತದ ಈಗಾಗಲೇ ಸೂಚನೆ ನೀಡಿದೆ.

ಇನ್ನು ನದಿಯಲ್ಲಿ ನೀರು ಬತ್ತಿದ್ದು, ಆಳ ಪ್ರದೇಶದಲ್ಲಿ ಮಾತ್ರ ನೀರು ಕಂಡು ಬರುತ್ತಿದೆ. ಈ ಕಾರಣ ನೇತ್ರಾವತಿ ನದಿಯಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಬಂಡೆಕಲ್ಲುಗಳೆ ಗೋಚರವಾಗುತ್ತಿದೆ.  ಅಚ್ಚರಿಯೆಂಬಂತೆ ಬತ್ತಿದ ನೇತ್ರಾವತಿ ನದಿಯಲ್ಲಿ ಸೀತಾದೇವಿಯ ಪಾದ ದರ್ಶನವಾಗಿದೆ. ಜೊತೆಗೆ ನದಿಯಲ್ಲಿ ಧಾರ್ಮಿಕ ನಂಬಿಕೆಯುಳ್ಳ ರಚನೆಗಳು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನದಿಯಲ್ಲಿ ಪತ್ತೆಯಾಗಿದೆ.

 ನದಿ ನೀರು ಬತ್ತಿದ್ದರಿಂದ ನದಿಯಲ್ಲಿರುವ ವಿಶೇಷಗಳು ಗೋಚರವಾಗಿದ್ದು, ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಶಿವಲಿಂಗ, ಹೂವು, ಜಡೆ, ಬಟ್ಟಲು, ನಂದಿ, ಪಾದಗಳು ಗೋಚರಿಸಿದ್ದು, ಸೀತಾ ದೇವಿಯದ್ದೇ ಪಾದ ಎಂಬ ಪೂಜನೀಯ ಭಾವವನ್ನ ಸ್ಥಳೀಯರು ಹೊಂದಿದ್ದಾರೆ. ಇನ್ನು ಗೋಚರವಾಗುತ್ತಿರುವ ಕೌತುಕಗಳು, ಧಾರ್ಮಿಕ ನಂಬಿಕೆಯಳ್ಳ ರಚನೆಯನ್ನು ನೋಡಲು ಜನರು ಕುತೂಹಲದಿಂದ ಆಗಮಿಸುತ್ತಿದ್ದಾರೆ.

Leave a Reply

Your email address will not be published. Required fields are marked *