ಕಾರ್ಕಳ: ಬೀದಿಬದಿ ವ್ಯಾಪಾರಿಗಳ ಜೀವನ ಸವಾಲಿನಿಂದ ಕೂಡಿದೆ, ವ್ಯಾಪಾರದಲ್ಲಿ ಏರುಪೇರಾದರೂ ವಿಚಲಿತರಾಗದೇ ಧೈರ್ಯದಿಂದ ವ್ಯಾಪಾರ ನಡೆಸುವ ಮೂಲಕ ಸ್ವಾಭಿಮಾನದ ಜೀವನ ನಡೆಸುವಂತಾಗಬೇಕು ಎಂದು ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಹೇಳಿದರು.
ಅವರು ಉಡುಪಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಹಾಗೂ ಕಾರ್ಕಳ ಪುರಸಭೆ ವತಿಯಿಂದ ಸೋಮವಾರ ಕಾರ್ಕಳ ರೋಟರಿ ಬಾಲಭವನದಲ್ಲಿ ನಡೆದ ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿ ಸ್ವನಿಧಿಯಿಂದ ಸಮೃದ್ಧಿ ಮೇಳ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವ್ಯಾಪಾರದಲ್ಲಿ ಸ್ಪರ್ಧೆಗಳು ಸಹಜ, ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರ ವೃದ್ಧಿಸಲು ಸರಕುಗಳ ಗುಣಮಟ್ಟ ಕಾಯ್ದುಕೊಳ್ಳಬೇಕು, ಮಾರುಕಟ್ಟೆಯಲ್ಲಿನ ಪೈಪೋಟಿ ಎದುರಿಸಲು ಹೊಸತನಕ್ಕೆ ತೆರೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಜಾನ್ ಡಿಸಿಲ್ವ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಅರುಣ್, ಕೌಶಲ್ಯ ಅಭಿಯಾನ ವ್ಯವಸ್ಥಾಪಕ ರಾಮಕೃಷ್ಣ, ಪುರಸಭಾ ಸದಸ್ಯರಾದ ಭಾರತಿ ಅಮೀನ್, ಪಲ್ಲವಿ ಪ್ರವೀಣ್, ಯೋಗೀಶ್ ದೇವಾಡಿಗ, ಪ್ರದೀಪ್ ರಾಣೆ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಕಳ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಈಶ್ವರ ನಾಯ್ಕ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು



