ಬೆಂಗಳೂರು: ಸರ್ಕಾರಕ್ಕೆ ತೆರಿಗೆ ವಂಚಿಸಿ ನಿಯಮಬಾಹಿರ ಹಾಗೂ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಆದರೆ ಕೆಂಪುಕಲ್ಲು ಹಾಗೂ ಮಣ್ಣು ಸಾಗಾಟದ ವಿಚಾರದಲ್ಲಿ ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆಯಾಗಬಾರದು ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
.ಗಣಿಗಾರಿಕೆ ವಿಚಾರದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಉನ್ನತಮಟ್ಟದ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ಪ್ರಾಧಿಕಾರದ ತಿಂಗಳಿಗೊಮ್ಮೆ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಮುಖ್ಯ ಮಂತ್ರಿಗಳು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.
ಕಳೆದ 2021ರ ಡಿಸೆಂಬರ್ ನಲ್ಲಿ ಹೊಸ ಮರಳು ನೀತಿಯನ್ನು ಜಾರಿಗೆ ತಂದಿದ್ದು,ಈ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವುದರ ಜತೆಗೆ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರ ಹಿತಾಸಕ್ತಿಯನ್ನೂ ಕಾಪಾಡಬೇಕಿದೆ. ಕಾರ್ಮಿಕರಿಗೆ ಸಮಸ್ಯೆಯಾಗದಂತೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದರು. ನಾನ್ ಸಿಆರ್ ಜೆಡ್ ಪ್ರದೇಶದಲ್ಲಿ ಹರಾಜು ಮೂಲಕ ಗುತ್ತಿಗೆ ಮಂಜೂರು ಮಾಡಲು 39 ಮರಳು ಬ್ಲಾಕ್ ಗಳನ್ನು ಗುರುತಿಸಲಾಗಿದೆ. ಈ ಪೈಕಿ 9 ಬ್ಲಾಕ್ ಗಳ ಟೆಂಡರ್ ಪ್ರಕ್ರಿಯೆ ಯಶಸ್ವಿಯಾಗಿದ್ದು, 30 ಮರಳು ಬ್ಲಾಕ್ ಗಳಿಗ ಮರುಹಾರಾಜು ಪ್ರಕ್ರಿಯೆ ಶೀಘ್ರ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಭೆಗೆ ಮಾಹಿತಿ ಒದಗಿಸಿದರು.
ಮರಳು ಗಣಿಗಾರಿಕೆಗೆ ಪರವಾನಗಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪರವಾನಗಿ ನೀಡಲಿ. ಮನೆ ಕಟ್ಟಲು ಅಗತ್ಯವಿರುವ ಸೈಜುಗಲ್ಲುಗಳಿಗೆ ಗಣಿಗಾರಿಕೆ ಮಾಡಲು ಕಾಯ್ದೆಯ ಸರಳೀಕರಣ ಮಾಡಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ಕೆಂಪುಕಲ್ಲಿನ ಗಣಿಗಾರಿಕೆಗೆ 71 ಕಾರ್ಯಾದೇಶಗಳನ್ನು ಒಂದು ವರ್ಷದ ಅವಧಿಗೆ ನೀಡಲಾಗಿದೆ. ಖನಿಜವನ್ನು ಬಾಕ್ಸೆಟ್ ಆಗಿ ವಿಂಗಡಿಸಿರುವುದರಿಂದ ಕಳೆದ2023ರ ಮಾರ್ಚ್ ನಲ್ಲಿ ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಗಳು 1994 ಕ್ಕೆ ತಿದ್ದುಪಡಿ ತಂದು ತಿದ್ದುಪಡಿ ನಿಯಮ 2023 ಜಾರಿಗೊಳಿಸಲಾಗಿದೆ. ಹೀಗಾಗಿ ಲ್ಯಾಟರೈಟ್ ಖನಿಜಕ್ಕೆ ಕಾರ್ಯಾದೇಶ ನೀಡುವುದನ್ನು ಕೈಬಿಡಲಾಗಿದೆ ಎಂದು ಸಭೆಯ ಗಮನಕ್ಕೆ ತರಲಾಯಿತು.
ಸ್ಥಳೀಯ ಜಿಲ್ಲೆಗೆ ಅಗತ್ಯವಿರುವಂತೆ ಕಾಯ್ದೆಗೆ ತಿದ್ದುಪಡಿ ಮಾಡಬಹುದು. ಕೆಂಪು ಕಲ್ಲು ಗಣಿಗಾರಿಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಮಾಡಲಾಗಿರುವ ತಿದ್ದುಪಡಿಯನ್ನು ಪುನಃ ತಿದ್ದುಪಡಿ ಮಾಡಿ ವಾಹನಗಳಿಗೆ ಅನುಮತಿ ನೀಡ ಬಹುದು. ಕ್ರಶಿಂಗ್ ಮಾಡಲಾದ ಮಣ್ಣನ್ನು ಜಿಲ್ಲೆಯೊಳಗಿನ ಬಳಕೆಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.