Share this news

ಬೆಂಗಳೂರು: ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್‌ವಿ ಕೋಚ್ ವರ್ಕ್ಸ್ನಲ್ಲಿನ ಖಾಸಗಿ ಬಸ್ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್‌ಗಳು ಇದ್ದವು. ಅದೃಷ್ಟವಶಾತ್ ಸಿಲಿಂಡರ್‌ಗೆ ಬೆಂಕಿ ತಾಗದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಲ್ಲದೆ 30 ಬಸ್‌ಗಳಲ್ಲಿದ್ದ ಬ್ಯಾಟರಿಗಳನ್ನು ತೆಗೆದಿದ್ದರಿಂದ ಅನಾಹುತ ತಪ್ಪಿದೆ. ಒಂದು ವೇಳೆ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ತಗುಲಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಇಂದು ಬೆಳಿಗ್ಗೆ 11:30ರ ಸುಮಾರಿಗೆ ಬಸ್‌ವೊಂದರ ತುರ್ತು ನಿರ್ಗಮನ ದ್ವಾರ ದುರಸ್ತಿ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೋಚ್ ವರ್ಕ್ಸ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದರೊಳಗಾಗಿ, ಎರಡು ಬಸ್‌ಗಳಿಗೆ ಬೆಂಕಿ ವ್ಯಾಪಿಸಿತ್ತು.

ನೋಡು ನೋಡುತ್ತಿದ್ದಂತೆ ಬೆಂಕಿ ಸ್ಥಳದಲ್ಲಿ ನಿಲ್ಲಿಸಿದ್ದ 30 ಬಸ್‌ಗಳ ಪೈಕಿ 18 ಬಸ್‌ಗಳಿಗೆ ಆವರಿಸಿಕೊಂಡಿದೆ. ಇದರಿಂದ 18 ಬಸ್‌ಗಳು ಸುಟ್ಟು ಕರಕಲಾಗಿವೆ. ಎಸಿ ಬಸ್‌ಗಳಲ್ಲಿ ಸೀಟ್, ಸ್ಕೀನ್‌ಗಳು ಇರುವುದರಿಂದ ಬೆಂಕಿ ಹೆಚ್ಚಾಗಿದೆ. ನಾಲ್ಕು ಬಸ್‌ಗಳಿಗೆ ಬೆಂಕಿ ತಗುಲಿಲ್ಲ, 10 ಬಸ್‌ಗಳನ್ನು ಸಿಬ್ಬಂದಿ ಹೊರತೆಗೆದಿದ್ದರು. ಎಸ್‌ವಿ ಕೋಚ್ ವರ್ಕ್ಸ್ನಲ್ಲಿ 42 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಇದೀಗ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 

 

 

 

 

 

 

 

Leave a Reply

Your email address will not be published. Required fields are marked *