Share this news

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ನಡುವಣ ಐಪಿಎಲ್ 2023ರ ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಈ ಹೈವೋಲ್ಟೇಜ್ ಪಂದ್ಯದಲ್ಲಿಆರ್​ಸಿಬಿ  8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಈ ಪಂದ್ಯ ವೀಕ್ಷಿಸಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು.ಆರ್​ಸಿಬಿ  ಅಭಿಮಾನಿಗಳು ವಿಶೇಷ ವೇಷ-ಭೂಷಣ ಧರಿಸಿ ಸ್ಟೇಡಿಯಂನಲ್ಲಿ ತುಂಬಿ ತುಳುಕುತ್ತಿದ್ದರು. ಇದರಲ್ಲಿ ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಅಭಿಮಾನಿಯೊಬ್ಬರು ಕಾಣಿಸಿಕೊಂಡಿದ್ದಾರೆ.

ಇಡೀ ವಿಶ್ವವೇ ಒಂದು ಭಾರಿ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕಾಂತಾರ’. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ಈ ಸಿನಿಮಾ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈಗಲೂ ಈ ಸಿನಿಮಾ ಕ್ರೇಜ್ ನಿಂತಿಲ್ಲ. ಇದಕ್ಕೆ ಸಾಕ್ಷಿ ಭಾನುವಾರ ಚಿನ್ನಸ್ವಾಮಿಯಲ್ಲಿ ಭಾನುವಾರ ನಡೆದ ಆರ್​ಸಿಬಿ ಹಾಗೂ ಮುಂಬೈ ನಡುವಣ ಪಂದ್ಯ. ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವದ ವೇಷವನ್ನು ಧರಿಸಿ ಕ್ರಿಕೆಟ್​ ನೋಡುತ್ತಾ ಎಂಜಾಯ್​ ಮಾಡುತ್ತಿರುವ ವ್ಯಕ್ತಿಯೊಬ್ಬರು ಈ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್​ ಆಗುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿಗೆ ಹುರಿದುಂಬಿಸಲು ಬಂದಿದ್ದ ಅಭಿಮಾನಿಗಳ ಫೋಟೋವನ್ನು ಹಂಚಿಕೊಂಡಿದೆ. ಇದರಲ್ಲಿ ಪಂಜುರ್ಲಿ ದೈವದ ವೇಷವನ್ನು ಧರಿಸಿರುವ ಅಭಿಮಾನಿಯ ಫೋಟೋ ಕೂಡ ಇದೆ. ಅನೇಕರು ಈ ಫೋಟೋವನ್ನು ಕಂಡು ಕಾಂತಾರವೆಂದು ಹೊಗಳಿದರೆ ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ
ತುಳುನಾಡಿನ ದೈವಾರಾಧನೆ ಒಂದು ವಿಶಿಷ್ಟವಾದ ಆರಾಧನಾ ರಂಗ ಕಲೆ, ಧಾರ್ಮಿಕ ಆರಾಧನಾ ಪದ್ಧತಿ. ಹಿಂದೂ, ಮುಸ್ಲಿಂ, ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ. ಹೀಗಿದ್ದಾಗ ಕ್ರಿಕೆಟ್ ಮೈದಾನದಲ್ಲಿ ಈರೀತಿಯ ವೇಷ ಧರಿಸಿ ಬರುವುದು ಸರಿಯಲ್ಲ ಎಂದು ಕೆಲವು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *