Share this news

ಬೆಂಗಳೂರು ಜ.06: ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ‌ ಅಳವಡಿಸಿಲ್ಲ ಎಂದು ಆಕ್ಷೇಪಿಸಿ ವಾಣಿಜ್ಯ ಮಳಿಗೆಗಳ ಬೋರ್ಡ್’ಗಳನ್ನು ಧ್ವಂಸ ಮಾಡಿರುವ ಆರೋಪದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡಗೆ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್,ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ಬೆಂಗಳೂರಲ್ಲಿ ವಾಣಿಜ್ಯ ಮಳಿಗೆ, ಕೈಗಾರಿಕೆಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯವಾಗಿ ಬರೆಯುವಂತೆ ಆಗ್ರಹಿಸಿ ಕೆಲ ದಿನಗಳ ಹಿಂದೆ ಕರವೇಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸೇರಿದಂತೆ ಹಲವು ಕಾರ್ಯಕರ್ತರು ಕನ್ನಡದಲ್ಲಿ ಬೋರ್ಡ್ ಹಾಕಿಲ್ಲವೆಂದು ವಾಣಿಜ್ಯ ಮಳಿಗೆಗಳ ನಾಮಫಲಕವನ್ನು ಧ್ವಂಸಗೊಳಿಸಿದ್ದರು. ಈ ಕುರಿತು ಟಿ.ಎ ನಾರಾಯಣಗೌಡ ಸೇರಿದಂತೆ 32 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ನಾರಾಯಣಗೌಡ ಸೆಂಟ್ರಲ್ ಜೈಲು ಸೇರಿದ್ದರು. ಇವರಲ್ಲದೇ 32 ಕರವೇ ಕಾರ್ಯಕರ್ತರು ಕೂಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

ಈ ಪ್ರಕರಣದಲ್ಲಿ ಜಾಮೀನು ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಗೆ ಕರವೇ ಅಧ್ಯಕ್ಷ ನಾರಾಯಣಗೌಡ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರಾದಾರ ದೇವೇಂದ್ರಪ್ಪ ಅವರು, ತೀರ್ಪನ್ನು ಇಂದಿಗೆ ಕಾಯ್ದಿರಿಸಿದ್ದರು.

ಇಂದು ನ್ಯಾಯಮೂರ್ತಿ ಬಿರಾದಾರ ದೇವೇಂದ್ರಪ್ಪ ಅವರು ತಮ್ಮ ತೀರ್ಪು ಪ್ರಕಟಿಸಿದ್ದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಅವರಿಗೆ ಜಾಮೀನು ಮಂಜೂರು ಮಾಡಿದ್ದು ಅವರು ಇಂದೇ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *