ಕಾರ್ಕಳ: ಬೆಳಗಾವಿಯ ಚಿಕ್ಕೋಡಿ ಹಿರೇಕೋಡಿ ಗ್ರಾಮದ ದಿಗಂಬರ ಜೈನಮನಿಗಳಾದ ಕಾಮ ಕುಮಾರನಂದಿ ಸ್ವಾಮಿಗಳ ಭೀಕರ ಹತ್ಯೆಯನ್ನು ಖಂಡಿಸಿ ಸೋಮವಾರ ಕಾರ್ಕಳ ಬಿಜೆಪಿ ಯುವ ಮೋರ್ಚಾವತಿಯಿಂದ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಅಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ ಜಗತ್ತಿಗೆ ಶಾಂತಿ ಹಾಗೂ ಅಹಿಂಸೆಯ ಸಂದೇಶ ನೀಡಿದ ಜೈನ ಧರ್ಮದ ಮುನಿಗಳ ಹತ್ಯೆ ನಡೆದಿದೆ ಎಂದರೆ ಇಡೀ ಮನುಕುಲವೇ ತಲೆತಗ್ಗಿಸುವ ವಿಚಾರವಾಗಿದೆ ಈ ಘಟನೆ ಖಂಡಿಸಿ ಜೈನ ಧರ್ಮೀಯರು ಬಹಳ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಆದರೆ ಇದೇ ಘಟನೆ ಅಲ್ಪಸಂಖ್ಯಾತ ಸಮುದಾಯದಲ್ಲಿ ನಡೆಯುತ್ತಿದ್ದರೆ ಪ್ರತಿಭಟನೆಯ ಹೆಸರಲ್ಲಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿತ್ತು. ಜೈನ ಮನೆಗಳ ಹತ್ಯೆಯಿಂದ ಕೇವಲ ಜೈನ ಸಮುದಾಯ ಮಾತ್ರವಲ್ಲ ಇಡೀ ದೇಶದ ಸಮುದಾಯವು ಇಂತಹ ಅಮಾನುಷ ಘಟನೆಗೆ ಕಂಬನಿ ಮಿಡಿದಿದೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಮಾಜದಲ್ಲಿ ಅಶಾಂತಿ ಹಾಗೂ ಪ್ರೀತಿಯ ವಾತಾವರಣ ಸೃಷ್ಟಿಯಾಗಿದ್ದು, ಶಾಂತಿ ಹಾಗೂ ಅಹಿಂಸೆಯ ಸಂದೇಶವನ್ನು ನೀಡುತ್ತಿದ್ದ ಜೈನಮುನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆಗೈದ ಪ್ರಕರಣ ಗಮನಿಸಿದರೆ ಮುಂದೆ ರಾಜ್ಯ ಯಾವ ದಿಕ್ಕಿನತ್ತ ಸಾಗಬಹುದು ಎಂದು ಜನರಲ್ಲಿ ಭಯ ಶುರುವಾಗಿದೆ ಎಂದರು.

ಮಂಗಳೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಯೊಬ್ಬ ತಾನು ಕೆಲಸಕ್ಕೆ ಇಟ್ಟಿದ್ದ ಕಾರ್ಮಿಕ ಸಂಬಳ ಕೇಳಿದ ಎನ್ನುವ ಕಾರಣಕ್ಕೆ ಆತನನ್ನು ಕೊಲೆಗೈದ ಘಟನೆಯ ಬೆನ್ನಲ್ಲೇ ಜೈನ ಮುನಿಯನ್ನು ಅತ್ಯಂತ ಭೀಕರವಾಗಿ ಹತ್ಯೆಗೈದ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಿಲ್ಲ ನಮ್ಮ ಮೌನ ಪ್ರತಿಭಟನೆಯು ದೌರ್ಬಲ್ಯ ಎಂದು ತಿಳಿದುಕೊಂಡರೆ ಅದು ಮೂರ್ಖತನ. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗದಿದ್ದಲ್ಲಿ ರಾಜ್ಯ ವ್ಯಾಪಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಮಹಾವೀರ ಕಡೆ ಎಚ್ಚರಿಸಿದರು

ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಮಾತನಾಡಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಹಿಂದೇಟು ಹಾಕಿ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅಧಿಕಾರ ಪಡೆಯಲು ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದು ಇದಕ್ಕೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

