ಬೆಳಗಾವಿ: ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವು ಇಂದಿನಿಂದ ಆರಂಭಗೊಂಡಿದ್ದು,ಇದೇವೇಳೆ ಸರ್ಕಾರಕ್ಕೆ ಆರಂಭದಲ್ಲೇ ರೈತರ ಪ್ರತಿಭಟನೆ ಬಿಸಿತಟ್ಟಿದೆ.
ಬರ ಪರಿಹಾರ, ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ರೈತರು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.ಈ ಸಂದರ್ಭದಲ್ಲಿ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ಬೆಳಗ್ಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಆರಂಭಗೊಳ್ಳುತ್ತಿದ್ದಂತೆಯೇ ರೈತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬರ ಪರಿಹಾರ ಹೆಚ್ಚಳ, ರೈತರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಮೊದಲೇ ರೈತರ ಪ್ರತಿಭಟನೆಯ ವಿಚಾರ ತಿಳಿದಿದ್ದ ಪೊಲೀಸರು, ಬೆಳಗಾವಿಯ ಸುವರ್ಣ ಸೌಧಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದರು. ಈ ನಡುವೆಯೂ ಇಂದು ರೈತರಿಂದ ಪ್ರತಿಭಟನೆ ನಡೆಸಿ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಕ್ಕೆ ಯತ್ನಿಸಲಾಯಿತು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸುವರ್ಣಸೌಧದ ಎದುರುಗಡೆ ಪ್ರತಿಭಟನೆ ನಡೆಸುತ್ತಿದ್ದು ಇದೇ ವೇಳೆ ರೈತರು ಪ್ರತಿಭಟನಾ ರ‍್ಯಾಲಿ ನಡೆಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ರೈತರು ಧಿಕ್ಕಾರ ಕೂಗಿದ್ದಾರೆ.ಈ ನಡುವೆ ಮಾರ್ಗ ಮಧ್ಯೆಯೇ ಪೊಲೀಸರು ರೈತರನ್ನು ತಡೆದು ಬಸ್ ನಲ್ಲಿ ಕರೆದೊಯ್ದಿದ್ದಾರೆ.ಬಸ್ ನಲ್ಲಿ ಪ್ರತಿಭಟನಾ ನಿರತರನ್ನು ಕರೆದುಕೊಂಡು ಕೊಂಡಸಾಕಪ್ಪ ದಲ್ಲಿರುವ ಪ್ರತಿಭಟನಾ ರೈತರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
