ಮಂಗಳೂರು : ಒಂದೇ ದಿನ ಅಕ್ಕಪಕ್ಕದ ಮನೆಯ ಇಬ್ಬರು ಯುವತಿಯರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೆಲ್ಯಾಡಿ ಸಮೀಪದ ಪಟ್ರಮೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಪಟ್ರಮೆ ಗ್ರಾಮದ ಪಟ್ಟೂರು ಬಾನು ಎಂಬುವವರ ಪುತ್ರಿ ರಕ್ಷಿತಾ (22) ಹಾಗೂ ಶ್ರೀನಿವಾಸ ಆಚಾರ್ಯ ಎಂಬುವವರ ಪುತ್ರಿ ಲಾವಣ್ಯ (21) ಎಂದು ಗುರುತಿಸಲಾಗಿದೆ. ಲಾವಣ್ಯ ಸುರತ್ಕಲ್ ಆಸ್ಪತ್ರೆಯಲ್ಲಿ ಮೃತಪಟ್ಟರೆ, ರಕ್ಷಿತಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೊಟ್ಟೆನೋವಿನಿಂದ ಬಳಲುತ್ತಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ. ಒಂದೇ ದಿನ ಅಕ್ಕಪಕ್ಕದ ಮನೆಯ ಇಬ್ಬರು ಯುವತಿಯರು ಸಾವನ್ನಪ್ಪಿದ್ದು ಅನುಮಾನಕ್ಕೆ ಕಾರಣವಾಗಿದೆ