ಬೆಳ್ತಂಗಡಿ: ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನ ಕೊಲೆಗಾರರು ಯಾರೆಂದು ಗೊತ್ತಿದೆ ಆದರೆ ನನಗೆ ಜೀವಬೆದರಿಕೆ ಇದೆ ಎನ್ನುವ ಹೇಳಿಕೆಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅತ್ಯಂತ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ವತಿಯಿಂದ ಸೌಜನ್ಯ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸೌಜನ್ಯ ಕೊಲೆಗಡುಕರು ಯಾರೆಂದು ತನಗೆ ತಿಳಿದಿದೆ ಎನ್ನುವ ವಸಂತ ಬಂಗೇರ ಅವರು ಸತ್ಯ ಗೊತ್ತಿದ್ದರೂ ಅದನ್ನು ಮುಚ್ಚಿಡುವುದು ಕಾನೂನಿನ ಪ್ರಕಾರ ಅಪರಾಧ.ನೀವು ಶಾಸಕರಾಗಿದ್ದ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಈ ಪ್ರಕರಣವನ್ನು ಮುಚ್ಚಿಟ್ಟಿದ್ದೀರಿ ಎಂದರೆ ಇದರ ಹಿಂದಿನ ಉದ್ದೇಶ ಏನಿದೆ ಎಂದು ಪ್ರಶ್ನಿಸಿದ ಶಾಸಕ ಸುನಿಲ್ ಕುಮಾರ್, ನಿಮ್ಮದೇ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ನಿಮಗೆ ಜೀವಭಯ ಇದೆ ಎಂದಾದರೆ ನಾವು ರಕ್ಷಣೆ ಕೊಡುತ್ತೇವೆ ಕೊಲೆಗಾರರು ಯಾರೆಂದು ಬಹಿರಂಗಪಡಿಸಿ ಎಂದು ವಸಂತ ಬಂಗೇರಗೆ ಬಹಿರಂಗ ಸವಾಲೆಸೆದರು.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಬಿಜೆಪಿಯ ಆಗ್ರಹವಾಗಿದೆ ಹಾಗೂ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ಹೋರಾಟ ನಡೆಸಲಿದ್ದು, ಈ ಹೋರಾಟದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ,ಈ ನಿಟ್ಟಿನಲ್ಲಿ ಉಭಯ ಜಿಲ್ಲೆಗಳ ಶಾಸಕರು ಹಾಗೂ ಸಂಸದರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಈ ಪ್ರಕರಣವನ್ನು ರಾಜ್ಯ ಸರ್ಕಾರವು ಮರುತನಿಖೆ ನಡೆಸಬೇಕೆಂದು ಶಾಸಕ ಸುನಿಲ್ ಕುಮಾರ್ ಒತ್ತಾಯಿಸಿದರು.
ಅಲ್ಲದೇ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಇದರಿಂದ ಮಹಿಳೆಯರಿಗೆ ನ್ಯಾಯ ಒದಗಿಸಲು ಕಠಿಣ ಕಾನೂನು ರೂಪಿಸಿದೆ ಎಂದರು.
ಸೌಜನ್ಯ ಹತ್ಯೆಯ ಪ್ರಕರಣ ಕುರಿತ ಹೋರಾಟದ ಪ್ರಕರಣವನ್ನು ಮುಂದಿಟ್ಟುಕೊಂಡು, ಕೆಲವು ಮತೀಯ ಶಕ್ತಿಗಳು ಧಾರ್ಮಿಕ ಕೇಂದ್ರಗಳನ್ನು ಅವಹೇಳನ ಮಾಡಿ,ಶ್ರದ್ಧಾಕೇಂದ್ರಗಳ ವಿರುದ್ಧ ಅಪನಂಬಿಕೆ ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.ನ್ಯಾಯಕ್ಕಾಗಿ ನಡೆಯುವ ಹೋರಾಟದ ದಾರಿ ದಿಕ್ಕುತಪ್ಪಬಾರದು ಎಲ್ಲರ ಉದ್ದೇಶ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವುದೇ ಆಗಿದೆ ಎಂದರು.
ಭೂಮಿಯ ಮೇಲೆ ಮನುಷ್ಯರು ಯಾರೂ ಶಾಶ್ವತವಲ್ಲ ಆದರೆ ನಾವು ನಂಬಿರುವ ದೇವಾಲಯಗಳು, ಧಾರ್ಮಿಕ ಶ್ರದ್ಧಾ ಕೇಂದ್ರಗಳು ,ದೈವದೇವರುಗಳು ಶಾಶ್ವತ ಹಾಗಾಗಿ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗದೇ ನಮ್ಮ ಎಲ್ಲರ ಉದ್ದೇಶ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವುದೇ ಆಗಬೇಕಿದೆ ಎಂದರು.