ಕಾರ್ಕಳ: ಕಾರ್ಕಳ-ಉಡುಪಿ ಮುಖ್ಯ ರಸ್ತೆಯ ಬೈಲೂರು ಕೆಳಪೇಟೆಯಲ್ಲಿ ಶುಕ್ರವಾರ ರಾತ್ರಿ 7 ಗಂಟೆಯ ವೇಳೆಗೆ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು ಮೂರು ಮಂದಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಯರ್ಲಪಾಡಿ ಕಾಂತರಗೋಳಿ ನಿವಾಸಿ ರಮೇಶ ಆಚಾರ್ಯ ಮೃತಪಟ್ಟ ದುರ್ದೈವಿ. ಈ ಅಪಘಾತದಲ್ಲಿ ಮೃತ ರಮೇಶ್ ಆಚಾರ್ಯ ಪತ್ನಿ ಶಕುಂತಲಾ ಆಚಾರ್ಯ ಹಾಗೂ ಜಾರ್ಕಳ ನಿವಾಸಿಗಳಾದ ಸುಧೀರ್ ಹಾಗೂ ಡೇವಿಡ್ ಗಂಭೀರ ಗಾಯಗೊಂಡಿದ್ದು ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಮೇಶ ಆಚಾರ್ಯ ದಂಪತಿಗಳು ಬೈಕ್ ಮೂಲಕ ರಸ್ತೆ ದಾಟುತ್ತಿದ್ದಾಗ ಉಡುಪಿಯಿಂದ ಜಾರ್ಕಳಕ್ಕೆ ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ಎರಡೂ ಬೈಕಿನಲ್ಲಿದ್ದ ನಾಲ್ಕು ಮಂದಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ರಮೇಶ ಆಚಾರ್ಯ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಮಧ್ಯೆಯೇ ಮೃತಪಟ್ಟಿದ್ದಾರೆ.