ಕಾರ್ಕಳ: ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಕಾರ್ಕಳ ಕೋಟೆ ಮಾರಿಯಮ್ಮ ದೇವಸ್ಥಾನವು ಜೀಣೋದ್ದಾರಗೊಂಡು ಬ್ರಹ್ಮಕಲಶೋತ್ಸವದ ಸಿದ್ದತೆಯಲ್ಲಿದೆ. ಮಾರ್ಚ್ 9ರಿಂದ 14ರವೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾರಿಯಮ್ಮ ದೇವಿ,ಉಚ್ಚಂಗಿ ಮಾರಿಯಮ್ಮ, ಮುಖ್ಯಪ್ರಾಣ ದೇವರು ಹಾಗೂ ಪರಿವಾರ ದೈವಗಳ ಬ್ರಹ್ಮಕಲಶೋತ್ಸವ ನಡೆಯಲಿದ್ದು 6 ದಿನಗಳ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ.
ನೂರಾರು ಸ್ವಯಂಸೇವಕರು ದೇವಿಯ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಕಾರ್ಕಳ ಪೇಟೆ ವಿದ್ಯುತ್ ದೀಪಾಲಂಕಾರದಿAದ ಕಂಗೊಳಿಸುತ್ತಿದ್ದು, ದೇವರ ಗರ್ಭಗುಡಿಯನ್ನು ಸಂಪೂರ್ಣವಾಗಿ ವಿವಿಧ ಬಗೆಯ ತರಕಾರಿ,ಹೂವು ಹಣ್ಣು,ತಳಿರುತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು ಸಹಸ್ರರಾರು ಭಕ್ತರು ಈ ದೃಶ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಪಾವನರಾಗುತ್ತಿದ್ದಾರೆ.
ಗುರುವಾರ ಮುಂಜಾನೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ,ಉಗ್ರಾಣ ಮುಹೂರ್ತ, ತೋರಣ ಮುಹೂರ್ತ,ದ್ವಾದಶ ನಾಳಿಕೇರ ಗಣಯಾಗ ಮುಂತಾದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ಸಿಗಲಿದೆ. ಈಗಾಗಲೇ ನೂರಾರು ಸ್ವಯಂ ಸೇವಕರು ತೋರಣ,ಚಪ್ಪರಕ್ಕೆ ಬೇಕಾದ ತೆಂಗಿನಗರಿಗಳನ್ನು ಹೆಣೆಯುವ, ಸ್ವಾಗತ ಗೋಪುರಗಳಿಗೆ ಅಲಂಕರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.ಮಾರಿಯಮ್ಮ ದೇವಿಯ ಬ್ರಹ್ಮಕಲಶೋತ್ಸವದ ಪುಣ್ಯಕಾರ್ಯಕ್ಕೆ ಈಗಾಗಲೇ ಭಾರೀ ಪ್ರಮಾಣದ ಹಸಿರು ಹೊರೆಕಾಣಿಕೆ ಬಂದಿದ್ದು ಕಾರ್ಕಳ ನಗರದಾದ್ಯಂತ ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.