ಕುಂದಾಪುರ: ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಆವರ್ಸೆ ಸಮೀಪ ಕಿರಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಿರಾಡಿ ಹಂಚಿನಮನೆ ನಿವಾಸಿ ಬಾಬಣ್ಣ ಶೆಟ್ಟಿ ಹಾಗೂ ಬೇಬಿ ಶೆಡ್ತಿಯವರ ಪುತ್ರ ಪ್ರಮೋದ್ ಶೆಟ್ಟಿ ( 24) ಮೃತ ಯುವಕ. ಪ್ರಮೋದ್ ಮನೆಯ ಹೊರಗೆ ಸ್ನೇಹಿತನ ಜತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ.ತಕ್ಷಣವೇ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ಪ್ರಮೋದ್ ಬಡಕುಟುಂಬದವನಾಗಿದ್ದು, ಶಿಕ್ಷಣ ಮುಗಿಸಿ ಬ್ರಹ್ಮಾವರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈತ ವಾಲಿಬಾಲ್ ಮತ್ತಿತರ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದ. ಇ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಭಾರೀ ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಬಳಸದಂತೆ ಎಚ್ಚರಿಸಿದರೂ ಯುವಜನತೆ ಮೊಬೈಲ್ ಬಿಟ್ಟಿರಲಾರದೇ ಇಂತಹ ದುರ್ಘಟನೆಗೆ ಬಲಿಯಾಗುತ್ತಿರುವುದು ದುರಂತವೇ ಸರಿ.