ನವದೆಹಲಿ: ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಾರತದಲ್ಲಿ ಉಗ್ರರ ಒಳನುಸುಳುವಿಕೆ ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿ ನಡೆಸುವ ಪ್ರಶ್ನೆಯೇ ಇಲ್ಲವೆಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ತಟಸ್ಥ ರಾಷ್ಟ್ರಗಳಲ್ಲಿ ಐಸಿಸಿ ಮತ್ತು ಕಾಂಟಿನೆಂಟಲ್ ಈವೆಂಟ್‌ಗಳಲ್ಲಿನ ಪಂದ್ಯಗಳನ್ನು ಆಡುವುದನ್ನು ಹೊರತುಪಡಿಸಿ ಉಳಿದಂತೆ ದ್ವಿಪಕ್ಷೀಯ ಏಕದಿನ ಸರಣಿ ಆಯೋಜಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಠಾಕೂರ್ ಸ್ಪಷ್ಟಪಡಿಸಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಸಾಧ್ಯವಿಲ್ಲ,ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ನಡೆಸುವುದಿಲ್ಲ ಎಂದು ಬಿಸಿಸಿಐ ಬಹಳ ಹಿಂದೆಯೇ ನಿರ್ಧರಿಸಿತ್ತು. ಇದು ಈ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಭಾವನೆ ಎಂದು ನಾನು ಭಾವಿಸುತ್ತೇನೆ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಹೇಳಿದ್ದಾರೆ.
ಇತ್ತೀಚೆಗೆ ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನ ಆರ್ಮಿ ಕರ್ನಲ್, ಮೇಜರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರ ಬಲಿದಾನದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಬಾಂಧವ್ಯ ಹದಗೆಡಲು ಕಾರಣವಾಗಿದೆ.ಭಾರತೀಯ ಪುರುಷರ ಕ್ರಿಕೆಟ್ ತಂಡವು ಪ್ರಸ್ತುತ ಶ್ರೀಲಂಕಾದಲ್ಲಿದ್ದು ಅಲ್ಲಿ ಅವರು ಏಷ್ಯಾ ಕಪ್ 2023 ರಲ್ಲಿ ಭಾಗವಹಿಸುತ್ತಿದ್ದಾರೆ. ಅವರು ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಎರಡು ಬಾರಿ ಪಾಕಿಸ್ತಾನವನ್ನು ಎದುರಿಸಿದ್ದಾರೆ.
ಏಷ್ಯಾ ಕಪ್ 2023 ಅನ್ನು ಮೂಲತಃ ಸಂಪೂರ್ಣವಾಗಿ ಪಾಕಿಸ್ತಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಭಾರತ ಸರ್ಕಾರದಿಂದ ಅನುಮತಿ ನಿರಾಕರಣೆಯನ್ನು ಉಲ್ಲೇಖಿಸಿ ತನ್ನ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.
ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದೆ.ಆದರೆ ಪಾಕಿಸ್ತಾನದ ಈ ಬೆದರಿಕೆಗೆ ಐಸಿಸಿ ಸೊಪ್ಪು ಹಾಕದೇ ವಿಶ್ವಕಪ್ ಬಹಿಷ್ಕರಿಸಿದರೆ ನಿಷೇಧ ಹಾಗೂ ಭಾರೀ ದಂಡದ ಎಚ್ಚರಿಕೆಯನ್ನು ನೀಡುವ ಸಾಧ್ಯತೆಯಿದೆ.