Share this news

ರಾಮನಗರ: ಭಾರತ ಒಂದಾಗಿರಬೇಕು ಎಂದು ಭಾರತ್ ಜೋಡೋ ಯಾತ್ರೆ ಮಾಡಿದವರೇ ಇವತ್ತು ಭಾರತ್ ತೋಡೋ ಎನ್ನುತ್ತಾರೆ ದೇಶ ಇಬ್ಭಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಬಿಡದಿಯ ತೋಟದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಪ್ರತ್ಯೇಕ ರಾಷ್ಟ್ರದ ಬಗ್ಗೆ ಸಂಸದ ಡಿ.ಕೆ‌‌‌.ಸುರೇಶ್ ಅವರು ನೀಡಿರುವ ಹೇಳಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.

ಇಲ್ಲಿ ಕಲ್ಲು ಹೊಡೆಕೊಂಡು ಲೂಟಿ ಮಾಡಿಕೊಂಡು ಇದ್ದೋರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತದೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂತವರನ್ನು ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದರೆ ಕಟ್ಟುತ್ತಾರೆಯೇ? ಅವರ ಸಾಮ್ರಾಜ್ಯ ಕಟ್ಟುಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಎಂದು ಅವರು ಟಾಂಗ್ ನೀಡಿದರು.

ಕೇಂದ್ರ ಸರ್ಕಾರದ ಮುಂದೆ ನಮ್ಮ ಬೇಡಿಕೆಗಳನ್ನು ಸಂಘರ್ಷದಿಂದ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ವಾಸ್ತವವನ್ನು ಅವರಿಗೆ ಮನವರಿಕೆ ಮಾಡಬೇಕು. ಅವರನ್ನು ಒಪ್ಪಿಸಿ, ಮನವರಿಕೆ ಮಾಡಿಕೊಟ್ಟು ಹಣ ಪಡೆಯಬೇಕು‌. ಅದನ್ನು ಬಿಟ್ಟು ಇವರ ಬಾಲಿಷ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ ಎಂದು ಸಂಸದ ಸುರೇಶ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂಬ ಕಾರಣ ಕೊಟ್ಟಿದ್ದಾರೆ. ಇದು ಅಪ್ರಭುದ್ಧತೆಯ ಹೇಳಿಕೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೋ ಯಾತ್ರೆ ಮಾಡಿದರು. ಈಗ ವಿಭಜನೆಯ ಮಾತನ್ನು ಆಡುತ್ತಿದ್ದಾರೆ. ಒಂದು ವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ? ಇವರು ನ್ಯಾಯ ದೊರಕಿಸಿಕೊಡುತ್ತಾರೆಯೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

 
 

 

 
 

Leave a Reply

Your email address will not be published. Required fields are marked *