ಕೊಲಂಬೋ: ಏಷ್ಯಾಕಪ್ ಕ್ರಿಕೆಟ್ ಅಂತಿಮ ಸಮರದಲ್ಲಿ ಬಲಿಷ್ಠ ಲಂಕಾ ಪಡೆಯನ್ನು ಹೀನಾಯವಾಗಿ ಸೋಲಿಸಿ ಭಾರತ ಭರ್ಜರಿ ಗೆಲುವಿನೊಂದಿಗೆ ಟ್ರೋಪಿ ತನ್ನದಾಗಿಸಿಕೊಂಡಿತು.
ಭಾನುವಾರ ಶ್ರೀಲಂಕಾದ ಕೊಲಂಬೋ ಪ್ರೇಮದಾಸ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಶ್ರೀಲಂಕಾ ತಂಡ ಮಳೆ ಭೀತಿಯ ಹಿನ್ನೆಲೆಯಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು,ಆದರೆ ಬ್ಯಾಟಿಂಗ್ ಆರಂಭಿಸಿದ ನಂತರ ಶ್ರೀಲಂಕಾದ ಲೆಕ್ಕಾಚಾರವೇ ತಲೆ ಕೆಳಗಾಯಿತು.
ಆರಂಭಿಕರಾಗಿ ಕ್ರೀಸ್ ಗೆ ಇಳಿದ ಕುಸಾಲ್ ಪಿರೇರಾ ಶೂನ್ಯಕ್ಕೆ ಔಟಾಗುವುದರ ಜತೆಗೆ ಲಂಕನ್ನರ ಕುಸಿತ ಆರಂಭವಾಗಿತ್ತು. ಒಂದು ಹಂತದ ಕೇವಲ 12 ರನ್ನಿಗೆ ಪ್ರಮುಖ6 ವಿಕೆಟ್ ಕಳೆದುಕೊಂಡು ಶ್ರೀಲಂಕಾ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಕುಸಲ್ ಮೆಂಡಿಸ್ ಹಾಗೂ ದುಸ್ಸನ್ ಹೇಮಂತ ಕುಸಿತ ತಡೆಯಲು ಪ್ರಯತ್ನಿಸಿದರೂ ಭಾರತದ ವೇಗಿಗಳ ಮುಂದೆ ಇವರ ಆಟ ನಡೆಯಲಿಲ್ಲ.
ಈ ಪಂದ್ಯದಲ್ಲಿ 5 ಬ್ಯಾಟರ್ ಗಳು ಸೊನ್ನೆ ಸುತ್ತಿದರೆ, ನಾಲ್ವರು ಒಂದಂಕಿ ಗಳಿಸಿದ್ದು ಅಂತಿಮವಾಗಿ ಲಂಕಾ 50 ರನ್ನಿಗೆ ಆಲೌಟ್ ಆಯಿತು.
ಇತ್ತ ಲಂಕಾ ನೀಡಿದ ಸಣ್ಣ ಮೊತ್ತವನ್ನು ಬೆನ್ನತ್ತಿದ ಆರಂಭಿಕರಾದ ಶುಭಮನ್ ಗಿಲ್ (27) ಹಾಗೂ ಇಶಾನ್ ಕಿಶನ್ (23) ಜೋಡಿ ವಿಕೆಟ್ ನಷ್ಟವಿಲ್ಲದೇ ಕೇವಲ6.1 ಓವರ್ ಗಳಲ್ಲಿ ಗುರಿ ತಲುಪಿ ಏಷ್ಯಾ ಕಪ್ ತನ್ನದಾಗಿಸಿಕೊಂಡಿತು.
ಈ ಪಂದ್ಯಾವಳಿಯಲ್ಲಿನ ಭರ್ಜರಿ ಯಶಸ್ಸು ಟೀಮ್ ಇಂಡಿಯಾ ಗೆ ಮುಂದಿನ ಅಕ್ಟೋಬರ್ ನಲ್ಲಿ ಆರಂಭವಾಗುವ ವಿಶ್ವಕಪ್ ಗೆ ಸಜ್ಜಾಗಲು ಹೆಚ್ಚಿನ ಬಲ ನೀಡಿದಂತಾಗಿದೆ.