ಮಂಗಳೂರು: ಈದ್ ಮಿಲಾದ್ ಮೆರವಣಿಗೆ ವೇಳೆ ಮಂಗಳೂರು ವೀರರಾಣಿ ಅಬ್ಬಕ್ಕ ಸರ್ಕಲ್ ಹತ್ತಿ ಹಸಿರು ಬಾವುಟ ಪ್ರದರ್ಶಿಸಿ ಪುಂಡಾಟ ಮೆರೆದ ಯುವಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಉಳ್ಳಾಲ ಪೊಲೀಸರು ವಿಡಿಯೋ ಆಧರಿಸಿ ಯುವಕರನ್ನು ಪತ್ತೆ ಹಚ್ಚಿ ನೋಟಿಸ್ ಜಾರಿ ಮಾಡಿದ್ದಾರೆ.
ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಮೆರವಣಿಗೆ ವೇಳೆ ನೂರಾರು ಯುವಕರು ಅಬ್ಬಕ್ಕ ಸರ್ಕಲ್ ಹತ್ತಿ ಪ್ರತಿಮೆ ಎದುರು ಹಸಿರು ಬಾವುಟ ಪ್ರದರ್ಶಿಸಿ ಚೀರಾಡುತ್ತಾ ಪುಂಡಾಟ ಮೆರೆದಿದ್ದರು. ಅಲ್ಲದೆ, ರಸ್ತೆ ಬಂದ್ ಮಾಡಿ ಬೈಕ್ ಹಾರ್ನ್ ಹಾಕಿಕೊಂಡು ಹುಚ್ಚಾಟ ಮೆರೆದಿದ್ದರು.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವೃ ಆಕ್ರೋಶ ವ್ಯಕ್ತವಾಗಿತ್ತು. ಉಳ್ಳಾಲ ಠಾಣಾ ಪೊಲೀಸರು, ವಿಡಿಯೋ ಆಧರಿಸಿ ಯುವಕರನ್ನು ಪತ್ತೆ ಹಚ್ಚಿದ್ದು, ಪುಂಡಾಟ ಮೆರೆದವರು ಮಂಜನಾಡಿ, ಮದಕ, ಬಂಟ್ವಾಳ, ಬೆಳ್ತಂಗಡಿ, ದೇರಳಕಟ್ಟೆ, ಕೊಣಾಜೆ ಹಾಗೂ ಉಳ್ಳಾಲ ಭಾಗದ ಯುವಕರು ಎಂದು ತಿಳಿದುಬಂದಿದೆ. ಸದ್ಯ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ಯುವಕರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ.