Share this news

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಐಕಳದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಲ್ಲಾರು ನಿವಾಸಿ ಗಣೇಶ ನಾಯ್ಕ್(26) ಹಾಗೂ ಕೊಡಗಿನ ರಂಜಿತ್ ಕೆ.ಆರ್(26) ಬಂಧಿತ ಆರೋಪಿಗಳು. ಬಂಧಿತರಿAದ ಸುಮಾರು 55 ಲಕ್ಷ ರೂ.ಮೌಲ್ಯದ 1 ಕೆಜಿ ತೂಕದ ಚಿನ್ನಾಭರಣ, 2 ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಕೆಲವು ಮಂದಿ ಆರೋಪಿಗಳು ಭಾಗಿಯಾಗಿದ್ದು, ತಲೆಮರೆಸಿಕೊಂಡ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ವಿವರ:
ಕಳೆದ ಜ.15 ರಂದು ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಮನೆಯ ಎದುರಿನ ಬಾಗಿಲಿನ ಲಾಕ್ ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ದರೋಡೆಗೈದು ಪರಾರಿಯಾಗಿದ್ದರು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆನಂತರ ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡ ಮಂಗಳೂರು ಸಿಸಿಬಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪ್ರಕರಣವನ್ನು ಇಬ್ಬರು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಆರೋಪಿ ಗಣೇಶ್ ನಾಯ್ಕ್ ಹಾಗೂ ಇತರ ಇಬ್ಬರು ಆರೋಪಿಗಳು ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಳರಾಯಿ ಚರ್ಚ್ ರಸ್ತೆಯಲ್ಲಿನ ಮನೆಯೊಂದರ ಬಾಗಿಲಿನ ಬೀಗವನ್ನು ಒಡೆದು ಮನೆಯಲ್ಲಿನ ಬೆಲೆಬಾಳುವ ಸೊತ್ತುಗಳನ್ನು ಹಾಗೂ ಮಾರುತಿ ಬ್ರೀಝಾ ಕಾರನ್ನು ಕಳವುಗೈದ ಪ್ರಕರಣದಲ್ಲಿ ಆರೋಪಿಗಳಾಗಿರುವ ವಿಚಾರ ಈ ಸಂದರ್ಭ ಬೆಳಕಿಗೆ ಬಂದಿದೆ. ಅಲ್ಲದೆ ಗಣೇಶ್ ನಾಯ್ಕ್ ವಿರುದ್ಧ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಬಾಲಕಿಯ ಮೇಲಿನ ಅತ್ಯಾಚಾರದ ಪ್ರಕರಣದಲ್ಲಿ ಚಿಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ಕೂಡ ದಾಖಲಾಗಿತ್ತು.ಈ ಪ್ರಕರಣ ನಡೆದ ಬಳಿಕ ಗಣೇಶ್ ನಾಯ್ಕ್ ಸಾಚಾ ವ್ಯಕ್ತಿಯಂತೆ ಓಡಾಡಿಕೊಂಡಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.


ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್‌ಐಯವರಾದ ರಾಜೇಂದ್ರ ಬಿ,ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ಎಎಸ್‌ಐಯವರಾದ ಶಶಿಧರ ಶೆಟ್ಟಿ, ಹರೀಶ್,ಮೋಹನ್ ಕೆ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *