ಮಂಗಳೂರು:ಕರ್ಣಾಟಕ ಬ್ಯಾಂಕಿನ ಅಧಿಕಾರಿಯೊಬ್ಬರು ತಾನು ವಾಸವಾಗಿದ್ದ ಫ್ಲ್ಯಾಟ್ ನಲ್ಲಿ ಅನುಮಾನಾಸ್ಪದವಾಗಿ ಸಾವೀಗೀಡಾಗಿದ್ದು, ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ಣಾಟಕ ಬ್ಯಾಂಕಿನ ಚೀಫ್ ಕಂಪ್ಲೆಯನ್ಸ್ ಅಧಿಕಾರಿ ವಾದಿರಾಜ ಆಚಾರ್ಯ (55) ಮೃತಪಟ್ಟ ವ್ಯಕ್ತಿ. ಬೋಂದೆಲ್‌ನ ವಸತಿ ಸಮುಚ್ಚಯದಲ್ಲಿ ಅವರು ವಾಸವಿದ್ದು, ಆ ಫ್ಲ್ಯಾಟ್‌ನ ಕೊಠಡಿಯಲ್ಲಿ ಕತ್ತು ಮತ್ತು ಹೊಟ್ಟೆಗೆ ಇರಿದ ಸ್ಥಿತಿಯಲ್ಲಿ ಅವರ ಮೃತದೇಹ ಗುರುವಾರ ಪತ್ತೆಯಾಗಿದೆಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರ್ಕಳದವರಾದ ವಾದಿರಾಜ ಅವರು ಕಳೆದ ಆರು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದಾರೆ. ಒಂದು ವರ್ಷದಿಂದ ಬೋಂದೆಲ್‌ನ ವಸತಿ ಸಮುಚ್ಚಯದಲ್ಲಿ ವಾಸವಿದ್ದರು. ವಾದಿರಾಜ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಮಕ್ಕಳು ಕಲಿಯುತ್ತಿದ್ದ ಶಾಲೆಯಲ್ಲಿ ಗುರುವಾರ ಪೋಷಕರ ಸಭೆ ಇತ್ತು. ಅವರ ಪತ್ನಿ ಈ ಸಭೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಅವರೊಬ್ಬರೇ ಇದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅವರನ್ನು ಕಚೇರಿಗೆ ಕರೆದೊಯ್ಯಲು ಎಂದಿನಂತೆ ಕಾರು ಅವರ ಮನೆಯ ಬಳಿಗೆ ಬಂದಿತ್ತು. ಅವರು ಸುಮಾರು ಹೊತ್ತಾದರೂ ಕಾರಿನ ಬಳಿಗೆ ತೆರಳಿರಲಿಲ್ಲ. ಚಾಲಕ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ಹಾಗಾಗಿ ಚಾಲಕ ಮನೆಗೆ ಹೋಗಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅಪಾರ್ಟ್‌ಮೆಂಟ್‌ನಲ್ಲಿದ್ದವರು ಸೇರಿ ಅವರನ್ನು ಎ.ಜೆ.ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಅವರು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಕಾರು ಚಾಲಕ ಮನೆಗೆ ಬಂದು ನೋಡಿದಾಗ ವಾದಿರಾಜ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತತ್ ಕ್ಷಣ ಅಪಾರ್ಟ್ಮೆಂಟ್ ನಲ್ಲಿದ್ದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಗಾಯವಾಗಿದ್ದರಿಂದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮನೆಯವರು ನೀಡುವ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ಸಾವಿನ ಕಾರಣ ತಿಳಿಯಬಹುದು,
ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆ ಮೇಲೆ ಇರಿದ ಗಾಯವಿದೆ.ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದೇವೆ.ಫೋನ್ ನಲ್ಲಿ ಯಾರೆಲ್ಲಾ ಮಾತನಾಡಿದ್ದಾರೆ ಎಂದು ತನಿಖೆ ಮಾಡಲಾಗುತ್ತದೆ, ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ತಿಳಿಸಿದ್ದಾರೆ