ಉಡುಪಿ, ಡಿಸೆಂಬರ್ 19 : ಸಾಣೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಕುರಿತು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಮತ್ತು ಪ್ರಗತಿ ಪರಿಶೀಲನ ಸಭೆಯ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಸಾಣೂರು ಗ್ರಾಮದಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರು ಪೈಪ್ ಲೈನ್ ಗೆ ಆಗಾಗ ಆಗುವ ತೊಂದರೆ ಹಾಗೂ ಪುಲ್ಕೇರಿ ಬೈಪಾಸ್ ನಿಂದ ಸಾಣೂರು ಪೇಟೆಯವರೆಗೆ ಸುಮಾರು ಒಂದು ಕಿ.ಮೀ ಸರ್ವಿಸ್ ರಸ್ತೆ ನಿರ್ಮಾಣ ಮಾಡದಿರುವ ಬಗ್ಗೆ ಸಭೆಯಲ್ಲಿ ಗ್ರಾಮಸ್ಥರಾದ ಸಾಣೂರು ನರಸಿಂಹ ಕಾಮತ್ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಮಸ್ಯೆಯ ಕುರಿತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೆದ್ದಾರಿ ಯೋಜನಾಧಿಕಾರಿಯವರ ಬಳಿ ವಿವರಣೆ ಕೇಳಿದಾಗ, ಈಗಾಗಲೇ ಹೆದ್ದಾರಿ ನಿರ್ಮಾಣದ ವೆಚ್ಚ ಅಂದಾಜಿಗಿಂತ ಎರಡು ಪಟ್ಟು ಹೆಚ್ಚಾಗಿರುವುದರಿಂದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದ್ದು,ಹೆದ್ದಾರಿ ಮೇಲಧಿಕಾರಿಗಳು ಒಪ್ಪಿಗೆ ನೀಡುತ್ತಿಲ್ಲವೆಂದರು.ಇದಕ್ಕೆ ಪ್ರತಿಯಾಗಿ ಮಾತನಾಡಿದ ಶಾಸಕರು,ರಸ್ತೆ ಸುರಕ್ಷತೆ ಮತ್ತು ಸುಗಮ ಸಂಚಾರದ ದೃಷ್ಟಿಯಿಂದ ಸರ್ವಿಸ್ ರೋಡ್ ತೀರ ಅಗತ್ಯ ಈ ಬಗ್ಗೆ ಸಂಸದರು ಮತ್ತು ಕೇಂದ್ರ ಸಚಿವರ ಬಳಿ ಸಮಾಲೋಚಿಸಿ,ಸರ್ವಿಸ್ ರೋಡ್ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಇದಲ್ಲದೇ ಈ ಸಮಸ್ಯೆ ಕುರಿತಂತೆ ತಮ್ಮ ಕಚೇರಿಯಿಂದ ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಈ ಸಭೆಯಲ್ಲಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಭಾಗವಹಿಸಿ, ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಸರ್ವಿಸ್ ರೋಡ್ ತೀರಾ ಅಗತ್ಯವಿದೆ ಎಂದು ಹೆದ್ದಾರಿ ಯೋಜನಾಧಿಕಾರಿಗೆ ಮನವರಿಕೆ ಮಾಡಿದರು.
ಹೆದ್ದಾರಿ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪ್ ಲೈನ್ ಆಗಾಗ ಹಾಳಾಗುತ್ತಿದ್ದು ಮೂರು ನಾಲ್ಕು ದಿನ ಕಳೆದರೂ ಗುತ್ತಿಗೆದಾರರು ಸರಿಪಡಿಸದಿರುವ ಬಗ್ಗೆ ಪಂಪು ಆಪರೇಟರ್ ಜಯಂತ ರವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಸ್ತೆ ಡೈವರ್ಷನ್ ಗಳಲ್ಲಿ ಬ್ಲಿಂಕರ್ ಅಳವಡಿಸುವುದು ಮತ್ತು ಗ್ರಾಮದ ಅಡ್ಡರಸ್ತೆಗಳಿಂದ ಹೆದ್ದಾರಿ ಮುಖ್ಯ ರಸ್ತೆಗೆ ಜನರ ಸುಗಮ ಸಂಚಾರಕ್ಕೆಸರಿಯಾಗಿ ಸಂಪರ್ಕ ಕಲ್ಪಿಸುವ ಬಗ್ಗೆ ಜಗದೀಶ್ ಶೆಟ್ಟಿಗಾರ್ ಸಭೆಯ ಗಮನಕ್ಕೆ ತಂದರು.
ಮರತಂಗಡಿ ಪದವಿಪೂರ್ವ ವಿದ್ಯಾಲಯದ ಎದುರು ಭಾಗದ ಗುಡ್ಡ ಜರೆಯುವ ಪ್ರದೇಶಕ್ಕೆ ತಡೆಗೋಡೆ ನಿರ್ಮಾಣ, ಸಾಣೂರು ಯುವಕ ಮಂಡಲದ ಆಟದ ಮೈದಾನದ ಅಂಚಿಗೆ ತಡೆಗೋಡೆ ನಿರ್ಮಾಣ, ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಕಿತ್ತು ಹಾಕಿರುವ ಸಾಣೂರು ಪದವಿಪೂರ್ವ ವಿದ್ಯಾಲಯದ ಕ್ರಾಂಕ್ರೇಟ್ ಪ್ರವೇಶ ದ್ವಾರ, ಪ್ರಯಾಣಿಕರ ತಂಗುದಾಣ, ಪಶು ವೈದ್ಯಕೀಯ ಆಸ್ಪತ್ರೆಯ ಕಟ್ಟಡ, ಇನ್ನಿತರ ರಿಕ್ಷಾ ಮತ್ತು ಪ್ರಯಾಣಿಕರ ತಂಗುದಾಣದ ಪುನರ್ ನಿರ್ಮಾಣ ಮಾಡಬೇಕೆಂದು ಶಾಸಕರು ಹಾಗೂ ಡಿಸಿ ಅವರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಟ್ರಕ್ ಟರ್ಮಿನಲ್ ಕುರಿತು ಶಾಸಕರು ಯೋಜನಾಧಿಕಾರಿಗಳ ಬಳಿ ವಿವರಣೆ ಕೇಳಿದಾಗ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಉತ್ತರ ನೀಡಲು ತಡವರಿಸಿದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು ಟ್ರಕ್ ಟರ್ಮಿನಲ್ ನಿರ್ಮಾಣದ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆದು ನೀಡುವಂತೆ ತಾಕೀತು ಮಾಡಿದರು.
ಸಾಣೂರು ನರಸಿಂಹ ಕಾಮತ್ ರವರು ಭೂಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ವಿಚಾರ ಪ್ರಸ್ತಾಪಿಸಿ ಡಿಸಿ ಅರ್ಬಿಟೇಶನ್ ಆದೇಶ ಈಗಾಗಲೇ ಸಾಣೂರು ಗ್ರಾಮದ 50 ಕ್ಕಿಂತ ಹೆಚ್ಚು ಭೂ ಮಾಲೀಕರಿಗೆ ಅಂಚೆ ಮೂಲಕ ಬಂದಿದ್ದರೂ ವಿಶೇಷ ಭೂಸ್ವಾದಿನಾಧಿಕಾರಿಯವರು ಕೇವಲ 11 ಆದೇಶಗಳು ಮಾತ್ರ ನಮಗೆ ಬಂದಿವೆ ಎಂದು ತಿಳಿಸಿದಾಗ ಶಾಸಕ ಸುನಿಲ್ ಕುಮಾರ್ ಇಲಾಖಾಧಿಕಾರಿಗಳ ವಿಳಂಬ
ನೀತಿಗೆ ಆಕ್ರೋಶ ವ್ಯಕ್ತಪಡಿಸಿ,ಕೂಡಲೇ ಡಿಸಿ ಅರ್ಬ್ರಿಟೇಶನ್ ಆದೇಶಕ್ಕೆ ಅನುಗುಣವಾಗಿ ಪರಿಹಾರವನ್ನು ವಿತರಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು
ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಮೊಹಮ್ಮದ್ ಆಜ್ಮಿ, ವಿಶೇಷ ಭೂಸ್ವಾದಿನಾಧಿಕಾರಿ ಮಹಮ್ಮದ್ ಇಸಾಕ್, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಮತ್ತು ದಿಲೀಪ್ ಬಿಲ್ಡ್ ಕಾನ್ ಜನರಲ್ ಮ್ಯಾನೇಜರ್ ರಾಘವ ರಾವ್, ಕನ್ಸ್ಟ್ರಕ್ಷನ್ ಮ್ಯಾನೇಜರ್ ಬಾಲಾಜಿ ಉಪಸ್ಥಿತರಿದ್ದರು.