Share this news

ಕಾರ್ಕಳ:ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರಲ್ಲಿನ ಸಾಣೂರು ಗ್ರಾಮದ ಪುಲ್ಕೇರಿ ಬೈಪಾಸ್ ವೃತ್ತದಿಂದ ಮಂಗಳೂರಿನ ಬಿಕರ್ನಕಟ್ಟೆಯವರೆಗೆ 45 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದು, ಈಗಾಗಲೇ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಕ್ತಾಯದ ಹಂತದಲ್ಲಿದೆ,ಆದರೂ ಹೆದ್ದಾರಿ ಇಲಾಖೆ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮುಂದಾಗದಿರುವುದಕ್ಕೆ ಹೋರಾಟಗಾರ ಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟದ ಎಚ್ಚರಿಕೆ ನೀಡಿದ್ದಾರೆ

ಸಾಣೂರು ಯುವಕ ಮಂಡಲದ ಎದುರಿನಿಂದ ಮುರತಂಗಡಿಯ ಸಾಣೂರು ಪದವಿಪೂರ್ವ ಕಾಲೇಜಿನವರೆಗೆ ಸುಮಾರು ಎರಡು ಕಿಮೀ ಉದ್ದಕ್ಕೆ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗಿರುತ್ತದೆ.
ಆದರೆ ಫುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಸಾಣೂರಿನ ಮುಖ್ಯಪೇಟೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣವಾಗದೇ, ರಾಷ್ಟ್ರೀಯ ಹೆದ್ದಾರಿಯ ಮುಖ್ಯರಸ್ತೆಯ ಕೆಲಸ ಕಾರ್ಯಗಳು ಮಾತ್ರ ಭರದಿಂದ ನಡೆಯುತ್ತಿವೆ.

ಈ ಹಿಂದೆ ಕಾರ್ಕಳದ ಹಾಲಿ ಶಾಸಕ ಸುನಿಲ್ ಕುಮಾರ್ ರವರು ರಾಜ್ಯದ ಸಚಿವರಾಗಿದ್ದಾಗ ಅಂದಿನ ಡಿಸಿ ಕೂರ್ಮ ರಾವ್ ರವರ ಅಧ್ಯಕ್ಷತೆಯಲ್ಲಿ ಕಾರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಭೂಸ್ವಾಧೀನಾಧಿಕಾರಿ, ಗುತ್ತಿಗೆದಾರರು ಮತ್ತು ಸಾಣೂರು ಗ್ರಾಮಸ್ಥರ ಸಭೆ ನಡೆಸಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 4.5 ಕಿಲೋಮೀಟರ್ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಇಲಾಖೆಗೆ ಸೂಚಿಸಿದ್ದರು.
ಈ ಕುರಿತು ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಕಚೇರಿಗೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಿದ್ದರು,ಆದರೂ ಸರ್ವೀಸ್ ರಸ್ತೆ ನಿರ್ಮಾಣದ ಕುರಿತು ಹೆದ್ದಾರಿ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿಲ್ಲ.
ಸರ್ವೀಸ್ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು, ಅಪಘಾತ ತಪ್ಪಿಸಲು ನಿಟ್ಟಿನಲ್ಲಿ ಸರ್ವೀಸ್ ರಸ್ತೆ ನಿರ್ಮಾಣವಾಗಬೇಕಿದೆ ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಒತ್ತಾಯಿಸಿದ್ದರು.
ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಯವರು ಕೂಡ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದರು.
ಇದೀಗ ಸರ್ವೀಸ್ ರಸ್ತೆ ‌ನಿರ್ಮಾಣಕ್ಕೆ ಅನುದಾನದ ಕೊರತೆಯಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಬಿಡಲಾಗಿದೆ ಎಂದು
ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಸ್ಪಷ್ಟಪಡಿಸಿದ್ದು, ಇದು ಖಂಡನೀಯ ಎಂದು ಹೋರಾಟಗಾರ ಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಕಾಮಗಾರಿ ಮುಗಿಯುವ ಒಳಗಾಗಿ ಸರ್ವೀಸ್ ರಸ್ತೆ ಮಾಡಿಕೊಡಬೇಕು ಇಲ್ಲವಾದಲ್ಲಿ ಸಾಣೂರು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಅನಿರ್ದಿಷ್ಟವಾಗಿ ಮುಷ್ಕರ ನಡೆಸುವುದಾಗಿ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ

 
 
 

 

 
 

Leave a Reply

Your email address will not be published. Required fields are marked *