ಮಂಗಳೂರು:ನಗರದಲ್ಲಿ ಸಂಚಾರ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರಿಂದ ಸಲಹೆಗಳು ಮತ್ತು ದೂರುಗಳು ಸಲ್ಲಿಸಲು ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ಪ್ರತೀ ತಿಂಗಳ ಮೂರನೇ ಶನಿವಾರದಂದು ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ಮಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ

ಈ ಕಾರ್ಯಕ್ರಮದ ಅಂಗವಾಗಿ ಇಂದು(ಜೂನ್ 17 ರಂದು) ನಗರದ ಕದ್ರಿ ಸರ್ಕ್ಯೂಟ್ ಹೌಸ್ ಲಯನ್ಸ್ ಅಶೋಕ ಸೇವಾ ಭವನದಲ್ಲಿ ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಭಾಗಿಯಾಗಲಿದ್ದು,ಅಲ್ಲದೇ ಮಂಗಳೂರು ಸಂಚಾರ ವಿಭಾಗದ ಉತ್ತರ ಪೊಲೀಸ್ ಠಾಣೆಯಲ್ಲಿ ನಗರ ಸಂಚಾರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಡಿ.ಕುಲಕರ್ಣಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಈ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ, ಅಹವಾಲು ಸಲ್ಲಿಸಬಹುದಾಗಿದೆ.

ಇದಲ್ಲದೇ ಪ್ರತೀ ತಿಂಗಳ ಮೂರನೇ ಶನಿವಾರದಂದು ಮಂಗಳೂರು ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಾರ್ವಜನಿಕರ ಸಲಹೆ ಸ್ವೀಕಾರ ಮತ್ತು ಸಮಸ್ಯೆ ಪರಿಹಾರ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಂಚಾರ ವ್ಯವಸ್ಥೆಯ ಕುರಿತು ತಮ್ಮ ಸಲಹೆ ಹಾಗೂ ಅಹವಾಲುಗಳನ್ನು ನೀಡಬಹುದಾಗಿರುತ್ತದೆ.

ಈ ಸಭೆಗಳಲ್ಲಿ ಮಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಜರಿರುತ್ತಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗಳಲ್ಲಿ ಭಾಗವಹಿಸಿ ಮಂಗಳೂರು ನಗರದಲ್ಲಿ ಸಂಚಾರ ಸುವ್ಯವಸ್ಥೆಯನ್ನು ಸಮರ್ಪಕಗೊಳಿಸುವ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ನೀಡಬಹುದಾಗಿದೆ. ಹಾಗೆಯೇ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮಂಗಳೂರು ನಗರ ಸಂಚಾರ ವಿಭಾಗದ ಪ್ರಕಟಣೆ ತಿಳಿಸಿದೆ

