ಮಂಗಳೂರು (ಮಾ.12): ಮಂಗಳೂರು: ನಗರದ ಪಡೀಲ್ ದರ್ಬಾರ್ ಗುಡ್ಡೆಯ ಬಳಿ ಶುಕ್ರವಾರ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಪತ್ತೆಯಾಗಿದೆ.
ಅಶೋಕ ಶೆಟ್ಟಿಅವರ ಜಾಗವನ್ನು ಫಾರೂಕ್ ಖರೀದಿಸಿದ್ದು ಅದಕ್ಕೆ ಆವರಣ ಗೋಡೆ ಕಟ್ಟುತ್ತಿದ್ದ ಕೆಲಸಗಾರರಿಗೆ ಪಕ್ಕದಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಜಾಗದ ಗಿಡಗಳ ನಡುವೆ ವಾಸನೆ ಬರುತ್ತಿತ್ತು. ಹತ್ತಿರ ಹೋಗಿ ನೋಡಿದಾಗ ಸುಮಾರು 35ರಿಂದ 45 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಹಗ್ಗ ಬಳಸಿ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಸಂಪೂರ್ಣ ಕೊಳೆತ ಮೃತದೇಹ ಪತ್ತೆಯಾಗಿದೆ.
ಸುಮಾರು 5 ಅಡಿ ಎತ್ತರವಿದ್ದು ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಮಾಹಿತಿ ಇದ್ದವರು ಕಂಕನಾಡಿ ನಗರ ಪೊಲೀಸ್ ಠಾಣೆ (0824-2220529) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಶವ ಪತ್ತೆ:
ಪಡೀಲ್ ಮಸೀದಿ ಬಳಿ ಶುಕ್ರವಾರ ಸುಮಾರು 45ರಿಂದ 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ.
5.5 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಕಪ್ಪು ತಲೆಕೂದಲು, ಮೀಸೆ, ಬಿಳಿ ಬಣ್ಣದ ಕುರುಚಲು ಗಡ್ಡ ಹೊಂದಿದ್ದಾರೆ. ಗೆರೆಗಳಿರುವ ಮಾಸಲು ಬಿಳಿ ಬಣ್ಣದ ಅರ್ಧ ತೋಳಿನ ಶರ್ಚ್ ಹಾಗೂ ಕೇಸರಿ ಬಣ್ಣದ ಲುಂಗಿ ಧರಿಸಿದ್ದಾರೆ. ಮಾಹಿತಿ ಇರುವವರು ಕಂಕನಾಡಿ ನಗರ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.