ಮಂಗಳೂರು : ಕೇರಳ ಮೂಲದ ದಂಪತಿ ಮಂಗಳೂರಿನ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಫಳ್ನೀರು ನ್ಯೂ ಬ್ಲೂಸ್ಟಾರ್ ಲಾಡ್ಜ್ನಲ್ಲಿ ನಡೆದಿದೆ.
ರವೀಂದ್ರ(55), ಸುಧಾ(50) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮೃತ ದಂಪತಿ ಕೇರಳದ ಕಣ್ಣೂರಿನ ತಳೀಪುರಂ ನಿವಾಸಿಗಳಾಗಿದ್ದು, ಫೆ.6ರಂದು ಲಾಡ್ಜ್ಗೆ ಬಂದು ರೂಮ್ ಬುಕ್ ಮಾಡಿದ್ದರು. ಸೋಮವಾರ ರಾತ್ರಿಯೇ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ ದಂಪತಿ ಮೂಲತಃ ಬಟ್ಟೆ ವ್ಯಾಪಾರಿಗಳು ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪ್ರಕರಣ ಕುರಿತಾಗಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದು, ಫೆ.6ರಂದು ಬೆಳಗ್ಗೆ 11 ಗಂಟೆಗೆ ಇಬ್ಬರು ಲಾಡ್ಜ್ಗೆ ಬಂದಿದ್ದಾರೆ. ಸದ್ಯಕ್ಕೆ ಸಿಕ್ಕ ಮಾಹಿತಿಯಂತೆ ಅವರಿಬ್ಬರು ಗಂಡ ಹೆಂಡತಿ ಎಂದು ತಿಳಿದು ಬಂದಿದ್ದು, ಐಡೆಂಟಿಟಿ ಫ್ರೂಫ್ ಕೊಟ್ಟು ರೂಂ ಪಡೆದಿದ್ದಾರೆ. ಅದೇ ದಿನ ರಾತ್ರಿ ಕೊನೆಯದಾಗಿ ಅವರು ರೂಂ ಒಳಗೆ ಇದ್ದಿದ್ದನ್ನು ಲಾಡ್ಜ್ ಸಿಬ್ಬಂದಿಗಳು ನೋಡಿದ್ದಾರೆ. ಆದಾದ ಬಳಿಕ ರೂಂನಿAದ ಹೊರ ಬಂದಿಲ್ಲ. ಇಂದು ಬೆಳಗ್ಗೆ ಮಾತನಾಡಿಸಲು ಪ್ರಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಆ ಬಳಿಕ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಒಡೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಕುಟುಂಬ ಸದಸ್ಯರಿಗೆ ಮಾಹಿತಿ ತಿಳಿಸಲಾಗಿದೆ. ಇವರು ಮೂಲತಃ ಕೇರಳ ರಾಜ್ಯದ ಕಣ್ಣೂರು ಭಾಗಕ್ಕೆ ಸೇರಿದವರಾಗಿದ್ದು, ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಬಟ್ಟೆ ವ್ಯಾಪಾರಿಗಳೆಂದು ಗೊತ್ತಾಗಿದೆ. ಕುಟುಂಬ ಸದಸ್ಯರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಸುತ್ತೇವೆ ಎಂದು ಹೇಳಿದ್ದಾರೆ.