ಮಂಗಳೂರು: ಹಿಜಾಬ್ ವಿವಾದ ಭುಗಿಲೆದ್ದಿದ್ದ ಮಂಗಳೂರಿನ ಕಾಲೇಜಿನಲ್ಲಿ ಮತ್ತೊಂದು ವಿವಾದ ಎದ್ದಿದ್ದು, ವಿವಾದದ ಮೂಲಕವೇ ಮಂಗಳೂರು ವಿವಿ ಕಾಲೇಜು ಮತ್ತೆ ಸುದ್ದಿಯಾಗಿದೆ. ವಿವಿ ಕಾಲೇಜು ಕಾರ್ಯಕ್ರಮಕ್ಕೆ ಹಿಂದೂ ಮುಖಂಡನಿಗೆ ಆಹ್ವಾನ ನೀಡಿರುವುದಕ್ಕೆ ತೀವೃ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕಾಲೇಜು ಆಡಳಿತ ಕಾರ್ಯಕ್ರಮವನ್ನೇ ರದ್ದು ಮಾಡಿದೆ.

ಮಂಗಳೂರಿನ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜೂ.23 ರಂದು ಪ್ರತಿಭಾ ದಿನಾಚರಣೆ ಹಾಗೂ ಜೂ.24ರಂದು ಕಾಲೇಜು ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಪ್ರತಿಭಾ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಖರ ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿಯಾಗಿ ಆಗಮಿಸಬೇಕಿತು. ಅವರನ್ನು ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘಟನೆ ಆಹ್ವಾನ ನೀಡಿದೆ ಎಂದು ಆರೋಪಿಸಿರುವ ಎನ್ಎಸ್ಯುಐ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಶ್ರೀಕಾಂತ್ ಶೆಟ್ಟಿಯವರನ್ನು ಕರೆಯಿಸಿ ಕಾಲೇಜಿನಲ್ಲಿ ಕೋಮು ವಿಷಬೀಜ ಬಿತ್ತಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ ಅಂತ ಎಬಿವಿಪಿಗೆ ಎಚ್ಚರಿಕೆ ನೀಡಿದೆ. ಅಲ್ಲದೇ ಮಂಗಳೂರು ಕಮಿಷನರ್ ಹಾಗೂ ಕಾಲೇಜು ಪ್ರಾಂಶುಪಾಲರಿಗೂ ಎನ್ಎಸ್ಯುಐ ದೂರು ನೀಡಿದ್ದು, ಶ್ರೀಕಾಂತ್ ಶೆಟ್ಟಿ ಅತಿಥಿಯಾಗಿ ಆಗಮಿಸಿದರೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿತ್ತು. ಈ ಹಿಂದೆ ಹಿಜಾಬ್ ವಿವಾದ, ಸಾವರ್ಕರ್ ಭಾವಚಿತ್ರ ಹಾಗೂ ಭಗವಾಧ್ಬಜ ಹಿಡಿದ ಭಾರತ್ ಮಾತೆ ಪೂಜನಾ ಕಾರಣದಿಂದ ಈ ಕಾಲೇಜು ವಿವಾದಕ್ಕೀಡಾಗಿತ್ತು.

ವಿವಾದದ ಬೆನ್ನಲ್ಲೇ ಕಾರ್ಯಕ್ರಮ ಮುಂದೂಡಿಕೆ!
ಇದೀಗ ಕೊನೆಗೂ ವಿವಾದದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ವಿವಿ ಕಾಲೇಜು ಆಡಳಿತ ಕಾರ್ಯಕ್ರಮ ಮುಂದೂಡಿದೆ. ನಾಳೆ(ಶುಕ್ರವಾರ) ನಡೆಯಬೇಕಿದ್ದ ಪ್ರತಿಭಾ ದಿನಾಚರಣೆ ಹಾಗೂ ಶನಿವಾರ ನಡೆಯಬೇಕಿರುವ ಕಾಲೇಜು ವಾರ್ಷಿಕೋತ್ಸವ ಮುಂದೂಡಿಕೆ ಮಾಡಲಾಗಿದೆ. ನಾಳೆ ಎಂದಿನAತೆ ತರಗತಿ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದ ನಿಯೋಗ ಮಂಗಳೂರು ಕಮಿಷನರ್ ಭೇಟಿಯಾಗಿ ಮನವಿ ಸಲ್ಲಿಸಿತ್ತು.

ಕೋಮು ಭಾವನೆ ಕೆರಳಿಸುವ ವ್ಯಕ್ತಿಗಳಿಗೆ ಸರ್ಕಾರಿ ಕಾಲೇಜು ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಕೋಮು ಭಾವನೆ ಕೆರಳಿಸುವ ಕಾರ್ಯ ಇವರಿಂದ ಆಗುತ್ತದೆ. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ ಎಂದಿತ್ತು. ಆದರೆ ಕಾಲೇಜು ಆಡಳಿತ ಕಾರ್ಯಕ್ರಮ ಮುಂದೂಡಿದೆ. ಈ ಮಧ್ಯೆ ಎಬಿವಿಪಿ ಮತ್ತು ಕಾಲೇಜು ಸಂಘದ ಮುಖಂಡರು ಅತಿಥಿ ಬದಲಾವಣೆ ಮಾಡಲ್ಲ ಅಂತ ಪಟ್ಟು ಹಿಡಿದಿದ್ದು, ನಾಳೆ ಕಾರ್ಯಕ್ರಮ ನಡೆಯದಿದ್ದರೂ ಮುಂದಿನ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿಯವರನ್ನೇ ಅತಿಥಿಯನ್ನಾಗಿ ಆಹ್ವಾನಿಸಲು ಪಟ್ಟು ಹಿಡಿದಿದ್ದಾರೆ.

