ಉಡುಪಿ: ಮಗಳನ್ನು ಕೊಟ್ಟ ಅತ್ತೆಯೇ ಅಳಿಯನ ಮನೆಯಿಂದ 10 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಸೇರಿದಂತೆ ನಗದನ್ನು ಕಳವು ಮಾಡಿದ್ದಾರೆ ಎನ್ನಲಾದ ಪ್ರಕರಣ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಣಿಪಾಲದ ಈಶ್ವರ ನಗರದಲ್ಲಿ ವಾಸವಾಗಿರುವ ಪ್ರೊ.ಭಾವಾನಾರಿ ಸತ್ಯನಾರಾಯಣ ಎಂಬವರ ಪುತ್ರ ಡಾ.ಭಾವಾನಾರಿ ಮಲ್ಲಿಕಾರ್ಜುನ್ ತನ್ನ ಹೆಂಡತಿಯ ತಾಯಿ ಎಂ.ಶೈಲಜಾ ಕುಮಾರಿ ವಿರುದ್ಧ ಕಳ್ಳತನದ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಕಳೆದ ಮಾರ್ಚ್ 28ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯ ಬೆಡ್ರೂಮಿನ ಕಪಾಟಿನಲ್ಲಿಟ್ಟಿದ್ದ 192 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಆಭರಣ ಹಾಗೂ 5 ಸಾವಿರ ರೂ. ನಗದನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 10,10,500ರೂ. ಎಂದು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಣಿಪಾಲ ಪೊಲೀಸರು ತನಿಖೆ ನಡೆಸುತಿದ್ದಾರೆ.
ಒಟ್ಟಿನಲ್ಲಿ ಮಗಳನ್ನು ಮದುವೆಯಾದ ತಪ್ಪಿಗೆ ಅತ್ತೆಯ ವಿರುದ್ಧವೇ ಅಳಿಯ ದೂರು ನೀಡುವಂತಾಗಿರುವುದು ವಿಪರ್ಯಾಸ.