ಮಣಿಪಾಲ: ವ್ಯಕ್ತಿಯೊಬ್ಬರು ಇಂದ್ರಾಳಿ ರೈಲ್ವೆ ಬ್ರಿಜ್ ಸನಿಹ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿರುವ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.
ಮೃತರನ್ನು ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಹೆಬ್ರಿಯ ರಾಘವೇಂದ್ರ ಹೆಗ್ಡೆ ಎಂದು ಗುರುತಿಸಲಾಗಿದೆ.
ಮಣಿಪಾಲ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಛಿದ್ರವಾದ ದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.
ಹಳಿಯ ಸಮೀಪದಲ್ಲಿ ಕಾರೊಂದು ಪತ್ತೆಯಾಗಿದ್ದು ಕಾರಿನಲ್ಲಿರುವ ಹಸಿರು ಫಲಕದಲ್ಲಿ ಮಂಗಳೂರು ಮಹಾನಗರ ಪಾಲಿಕೆ, ಮುಖ್ಯ ಲೆಕ್ಕಾಧಿಕಾರಿ ಎಂಬ ಉಲ್ಲೇಖವಿದೆ. ಜೊತೆಗೆ ಆಧಾರ್ ಕಾರ್ಡ್ ಕೂಡ ಪತ್ತೆಯಾಗಿದ್ದು ಇದರಿಂದ ಮೃತ ವ್ಯಕ್ತಿಯನ್ನು ಹೆಬ್ರಿಯ ಸಂಜೀವ ಹೆಗ್ಡೆ ಅವರ ಪುತ್ರ ರಾಘವೇಂದ್ರ ಹೆಗ್ಡೆ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.