ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಗೆ ಇಂದು (ಬುಧವಾರ) ಅದ್ಧೂರಿ ಚಾಲನೆ ಸಿಗಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ನಡೆಯಲಿರುವ ಈ ಯೋಜನೆಯ ಸಭಾ ಕಾರ್ಯಕ್ರಮವನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ರಾಜ್ಯಸಭಾ ಪ್ರತಿಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಲಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಕೆ.ಎಚ್.ಮುನಿಯಪ್ಪ, ಕೆ.ವೆಂಕಟೇಶ್, ಎನ್. ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ, ಎಸ್.ಎಸ್. ಬೋಸರಾಜು, ಮೇಯರ್ ಶಿವಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಂದ ಸುಮಾರು 1.30 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಮೊದಲ ತಿಂಗಳು 1.11 ಕೋಟಿ ಪಡಿತರ ಕುಟುಂಬಗಳ ಮನೆಯೊಡತಿಯರಿಗೆ ತಲಾ 2000 ರು.ನಂತೆ ಒಟ್ಟು ಅಂದಾಜು .2,220 ಕೋಟಿ ಹಣ ನೇರ ನಗದು ಪಾವತಿಯಾಗುವ ನಿರೀಕ್ಷೆ ಇದೆ.
ಈ ಯೋಜನೆಗೆ ಪ್ರತಿ ವರ್ಷ 32 ಸಾವಿರ ಕೋಟಿ ರು. ಅನುದಾನ ಬೇಕೆಂದು ಸರ್ಕಾರ ಅಂದಾಜಿಸಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಈಗಾಗಲೇ 5 ತಿಂಗಳು ಕಳೆದಿರುವುದರಿಂದ ಸುಮಾರು 20 ಸಾವಿರ ಕೋಟಿ ರು. ಬೇಕಾಗಬಹುದೆಂದು ಹೇಳಲಾಗಿದೆ. ಪ್ರಸ್ತುತ ನೋಂದಣಿಯಾಗಿರುವ 1.11 ಕೋಟಿ ಕುಟುಂಬಗಳ ಜೊತೆಗೆ ಬರುವ ತಿಂಗಳುಗಳಲ್ಲಿ ಈ ಯೋಜನೆಗೆ ಅರ್ಹತೆ ಇರುವ ಇನ್ನೂ 23 ಲಕ್ಷ ಕುಟುಂಬಗಳು ನೋಂದಣಿಯಾಗುವ ನಿರೀಕ್ಷೆ ಇದೆ. ಇಷ್ಟಾದರೂ ಪ್ರತಿ ತಿಂಗಳು 2660 ಕೋಟಿ ರು.ನಂತೆ ಈ ಆರ್ಥಿಕ ವರ್ಷದ (2024ರ ಮಾರ್ಚ್ ವರೆಗೆ) 8 ತಿಂಗಳಿಗೆ ಸುಮಾರು 20 ಸಾವಿರ ಕೋಟಿ ರು. ಬೇಕಾಗಬಹುದು ಎಂಬ ಲೆಕ್ಕಾಚಾರ ಸರ್ಕಾರದ್ದು.