Share this news

ಉಡುಪಿ : ಉಡುಪಿ ಮಲ್ಪೆಯ ಸಮುದ್ರ ತಟದಲ್ಲಿ ಎರಡು ಶಾವಿಗೆ ಮಾದರಿಯ ವಿಚಿತ್ರ ವಸ್ತುಗಳು ಕಂಡುಬಂದಿತ್ತು. ದಶಕಗಳ ಬಳಿಕ ಕಂಡು ಬಂದ ಈ ವಿಚಿತ್ರ ವಿದ್ಯಮಾನದಿಂದ ಸ್ಥಳೀಯರು ಅಚ್ಚರಿಪಟ್ಟಿದ್ದರು. ಈಗ ವಿಜ್ಞಾನಿಗಳು ಸ್ಥಳ ಭೇಟಿ ಮಾಡಿದ್ದು, ಗಂಗೆ ಕೂದಲಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

ಸದ್ಯ ಇದೇ ವಿಚಾರವಾಗಿ ಸಂಶೋಧನೆ ನಡೆಸಿದ ವಿಜ್ಞಾನಿಗಳು ಇದು ಸಲೋಪೆನ್ಟ್ ಟ್ಯೂಬ್ ವರ್ಮ್ ಎಂದು ಪತ್ತೆ ಹಚ್ಚಿದ್ದಾರೆ. ಮಲ್ಪೆ ಕಡಲತಡಿಯಲ್ಲಿ ಈ ವಿಚಿತ್ರ ಜೀವಿ ಪತ್ತೆಯಾದ ಬೆನ್ನಲ್ಲೇ ಮೀನುಗಾರಿಕಾ ಮಹಾವಿದ್ಯಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮೀನುಗಾರಿಕಾ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ಮಗದ ಮತ್ತು ತಂಡದವರು ಮಲ್ಪೆಯ ಕಡಲ ತಡಿಯಲ್ಲಿ ಬಿದ್ದಿದ್ದ ಈ ವಿಚಿತ್ರ ವಸ್ತುವನ್ನು ಪರಿಶೀಲನೆ ನಡೆಸಿ ಇದು ಸಲೋಪೆನ್ಟ್ ಟ್ಯೂಬ್ ವರ್ಮ್ ಖಚಿತ ಪಡಿಸಿದ್ದಾರೆ.

ಈ ಬಾರಿ ಬಿಪರ್ ಜಾಯ್ ಚಂಡಮಾರುತ ಬಂದಿತ್ತು. ಇದರಿಂದ ಕಡಲ ನೀರು ಅಡಿಮೇಲಾಗಿತ್ತು. ಕಡಲಿನ ಅಲೆಗಳು ಅಬ್ಬರಿಸಿದ್ದವು. ಇದರ ಪ್ರಭಾವದಿಂದಾಗಿ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಪಣಂಬುರು ಬೀಚಿನಲ್ಲಿ ಈ ಇಂಥದ್ದೇ ಜೀವಿ ಪತ್ತೆಯಾಗಿತ್ತು. ಸಮುದ್ರದಲ್ಲಿ ಉಪ್ಪಿನ ಅಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಜೀವಿ ಸತ್ತು ರಾಶಿಯಾಗಿ ತೇಲಿ ಸಮುದ್ರ ತಡಕ್ಕೆ ಬಂದಿದೆ. ಇದರ ಬಗ್ಗೆ ಯಾರು ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಇದು ಕೊಳೆತು ಗೊಬ್ಬರವಾದಲ್ಲಿ ಯಥೇಚ್ಛವಾಗಿ ಮೀನುಗಳು ಇಲ್ಲಿ ಉತ್ಪತ್ತಿಯಾಗುವ ಸಾಧ್ಯತೆ ಇದೆ ಹಾಗಾಗಿ ಭಯಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ‌. 

ಅಲ್ಲದೆ ಹೆಚ್ಚಿನ ಸಂಶೋಧನೆಗಾಗಿ ಇದರ ಸ್ಯಾಂಪಲ್ ಸಂಗ್ರಹಿಸಿ ತಂಡ ತೆರಳಿದೆ.  ಮಲ್ಪೆಯ ಕಡಲ‌ತಡಿಯಲ್ಲಿ ಶ್ಯಾವಿಗೆಯಂತೆ ಬಿದ್ದಿದ್ದ ಈ ಪಾಚಿ ಸುಮಾರು ಎರಡು ದಶಕದ ನಂತರ ಕಾಣಿಸಿಕೊಂಡಿತ್ತು. ಸಮುದ್ರದ ಅಲೆಗಳಲ್ಲಿ ತೇಲಿ ಬಂದಿದ್ದ ಈ ವಿಚಿತ್ರ ವಸ್ತುವನ್ನು ನೋಡಿ ಸ್ಥಳೀಯ ಮೀನುಗಾರರು ಗೊಂದಲಕ್ಕೀಡಾಗಿದ್ದರು. ಇದೀಗ ಮೀನುಗಾರರು ನಿರಾಳರಾಗಿದ್ದಾರೆ.

ಇತ್ತೀಚೆಗೆ ಬಿಫರ್ ಜಾಯ್ ಚಂಡಮಾರುತ ತನ್ನ ಅಬ್ಬರ ತೋರಿಸಿತ್ತು. ಯಾವುದೇ ಚಂಡಮಾರುತ ಬಂದಾಗ ಕಡಲು ತನ್ನ ಒಡಲಿನಲ್ಲಿರುವ ಎಲ್ಲಾ ವಸ್ತುಗಳನ್ನು ತಂದು ದಡಕ್ಕೆ ರಾಶಿ ಹಾಕುತ್ತದೆ. ದಶಕಗಳ ಬಳಿಕ ಗಂಗೆಯ ಕೂದಲು ಕಡಲತೀರದಲ್ಲಿ ರಾಶಿ ಬಿದ್ದಿದೆ. ನೋಡಲು ಕಲ್ಮಶದಂತೆ ಕಂಡರೂ ಇದಕ್ಕೆ ಯಾವುದೇ ದುರ್ವಾಸನೆ ಇಲ್ಲ. ಹುಲ್ಲು ರಾಶಿಯ ರೀತಿಯಲ್ಲಿ ಅಥವಾ ನಾವು ಆಹಾರವಾಗಿ ಸ್ವೀಕರಿಸುವ ಶಾವಿಗೆಯ ಎಳೆಯಂತೆ ಕಾಣುತ್ತದೆ. ಹಾಗಂತ ಈ ಗಂಗೆಯ ಕೂದಲನ್ನು ಯಾರು ತೆರವು ಮಾಡುವುದಿಲ್ಲ. ಮತ್ತೊಮ್ಮೆ ಅಬ್ಬರದ ಕಡಲಿನ ಅಲೆಗಳು ತೀರ ಪ್ರದೇಶಕ್ಕೆ ಬಂದಾಗ, ಅವು ಈ ರಾಶಿಯನ್ನು ಹೊತ್ತು ಮತ್ತೆ ಕಡಲಿನ ಒಡಲಿಗೆ ಹಾಕುತ್ತದೆ. ಮೀನಿಗೆ ಇದು ಅತ್ಯುತ್ತಮ ಆಹಾರ. ಹಾಗಾಗಿ ಯಾರು ಕೂಡ ಇದರ ಗೋಜಿಗೆ ಹೋಗುವುದಿಲ್ಲ.

Leave a Reply

Your email address will not be published. Required fields are marked *