Share this news

ಕೇಪ್​ಟೌನ್​: ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಮೈದಾನದಲ್ಲಿ ಗುರುವಾರ ನಡೆದ ಮಹಿಳಾ T20 ವಿಶ್ವಕಪ್​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 5 ರನ್​ಗಳ ರೋಚಕ ಜಯ ಗಳಿಸಿದೆ.

ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಮಹಿಳಾ ಟಿ20 ವಿಶ್ವಕಪ್​ ಫೈನಲ್​ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸೀಸ್ ತಂಡಕ್ಕೆ ಅಲಿಸಾ ಹೀಲಿ (25) ಹಾಗೂ ಬೆತ್ ಮೂನಿ (54) ಉತ್ತಮ ಆರಂಭ ಒದಗಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಗ್ ಲನ್ನಿಂಗ್ 34 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದರು. ಹಾಗೆಯೇ ಕೇವಲ 18 ಎಸೆತಗಳಲ್ಲಿ 31 ರನ್​ ಬಾರಿಸುವ ಮೂಲಕ ಗಾರ್ಡನರ್ ಅಬ್ಬರಿಸಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ಆಸ್ಟ್ರೇಲಿಯಾ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.

ಆಸೀಸ್ ನೀಡಿ ದ 173 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (9) ಹಾಗೂ ಸ್ಮೃತಿ ಮಂದಾನ (2) ಬೇಗನೆ ನಿರ್ಗಮಿಸಿದರು. ಆ ಬಳಿಕ ಬಂದ ಯಶಿಕಾ ಭಾಟಿಯಾ (4) ರನೌಟ್ ಆಗಿ ಹೊರನಡೆದರು.ಈ ಹಂತದಲ್ಲಿ ಜೊತೆಗೂಡಿದ ಜೆಮಿಮಾ ರೋಡ್ರಿಗಸ್ ಹಾಗೂ ನಾಯಕಿ ಹರ್ಮನ್​ಪ್ರೀತ್ ಕೌರ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್​ಗೆ 69 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 24 ಎಸೆತಗಳಲ್ಲಿ 43 ರನ್ ಬಾರಿಸಿದ ಜೆಮಿಮಾ ಔಟಾದರು.ಮತ್ತೊಂದೆಡೆ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಹರ್ಮನ್​ಪ್ರೀತ್ ಕೌರ್ (52) ಹಾಫ್ ಸೆಂಚುರಿ ಬೆನ್ನಲ್ಲೇ ಕೆಟ್ಟ ರನೌಟ್​ಗೆ ಬಲಿಯಾದರು. ಇದರ ಬೆನ್ನಲ್ಲೇ ರಿಚಾ ಘೋಷ್ (14) ಕೂಡ ವಿಕೆಟ್ ಕೈಚೆಲ್ಲಿದರು. ಪರಿಣಾಮ ಕೊನೆಯ 4 ಓವರ್​ಗಳಲ್ಲಿ ಟೀಮ್ ಇಂಡಿಯಾಗೆ 38 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದೀಪ್ತಿ ಶರ್ಮಾ ಹಾಗೂ ಸ್ನೇಹ್ ರಾಣಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.ಅದರಂತೆ ಕೊನೆಯ 12 ಎಸೆತಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 20 ರನ್​ಗಳು ಬೇಕಿತ್ತು,ಆದರೆ 19ನೇ ಓವರ್​ನ ಕೊನೆಯ ಎಸೆತದಲ್ಲಿ ಸ್ನೇಹ್ ರಾಣಾ (11) ಬೌಲ್ಡ್ ಆದರು. ಕೊನೆಯ ಓವರ್​ನಲ್ಲಿ 16 ರನ್​ಗಳ ಟಾರ್ಗೆಟ್ ಪಡೆದ ಭಾರತ 10 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 5 ರನ್​ಗಳ ರೋಚಕ ಜಯ ಸಾಧಿಸಿ ಫೈನಲ್​ಗೆ ಪ್ರವೇಶಿಸಿತು.

Leave a Reply

Your email address will not be published. Required fields are marked *