Share this news

ಬೆಂಗಳೂರು: ಶಕ್ತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಾರಿಗೆ ನಿಗಮ ಪ್ರಯತ್ನಿಸುತ್ತಿದೆ. ಆದರೂ ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುತ್ತಿವೆ. ಹೀಗಾಗಿ ಮಹಿಳೆಯರೊಂದಿಗೆ ಚಾಲಕರು, ನಿರ್ವಾಹಕರು ಸೌಜನ್ಯದಿಂದ ವರ್ತಿಸುವಂತೆ ಕೆ ಎಸ್ ಆರ್ ಟಿ ಸಿ ಖಡಕ್  ಆದೇಶನೀಡಿದೆ.

ಈ ಕುರಿತು ಇಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಕರ್ನಾಟಕ ಸರ್ಕಾರವು ರಾಜ್ಯದ ಸಮಸ್ತ ಮಹಿಳೆಯರಿಗಾಗಿ ಜಾರಿಗೆ ತಂದಿರುವ ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನಮ್ಮ ಚಾಲನಾ ಸಿಬ್ಬಂದಿಗಳ ಪರಿಶ್ರಮವು ಹೆಚ್ಚಿನ ಮಟ್ಟದಲ್ಲಿರುತ್ತದೆ. ಆದರೆ ಕೆಲವೊಂದು ಅಹಿತಕರ ಘಟನೆಗಳು ಈ ಮಹತ್ವದ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡುತ್ತಿದೆ. ಚಾಲನಾ ಸಿಬ್ಬಂದಿಗಳು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವುದು ಹಾಗೂ ಈ ಬಗ್ಗೆ ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕರ್ತವ್ಯ ನಿರ್ವಹಿಸುವುದು. ತಪ್ಪಿದಲ್ಲಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಅದಾಗ್ಯೂ ಸಹ ಮಹಿಳೆಯರು ಇರುವ ಬಸ್ ನಿಲ್ದಾಣ/ಬಸ್ ನಿಲುಗಡೆ ಸ್ಥಳಗಳಲ್ಲಿ ಬಸ್ ನಿಲ್ಲಿಸದೇ ಇರುವುದು/ಮಹಿಳಾ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣಿಸುವ ಬಗ್ಗೆ ಅಪಹಾಸ್ಯ ಮಾಡುವುದು ಹಾಗೂ ಇನ್ನಿತರ ರೀತಿಯಲ್ಲಿ ಮಹಿಳೆಯರೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಸಾಮಾಜಿಕ ಜಾಲತಾಣ/ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗುತ್ತಿರುವುದನ್ನು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯರಿಗೆ ವಿತರಿಸುವ ಟಿಕೇಟ್ ಮೊತ್ತವನ್ನು ಸಾರಿಗೆ ಆದಾಯವೆಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮದ ಚಾಲಕ ಮತ್ತು ನಿರ್ವಾಹಕರುಗಳು ನಿಗದಿತ ಎಲ್ಲಾ ಬಸ್ ನಿಲ್ದಾಣ/ಬಸ್ ನಿಲುಗಡ ಸ್ಥಳಗಳಲ್ಲಿ ನಿಲುಗಡೆ ನೀಡಿ, ಪ್ರಯಾಣಿಕರನ್ನು ವಿಶೇಷವಾಗಿ ಮಹಿಳೆಯರು/ವಿದ್ಯಾರ್ಥಿಗಳನ್ನು ಹತ್ತಿಸಿ/ಇಳಿಸುವುದು ಹಾಗೂ ಸದರಿ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು. ಇನ್ನು ಮುಂದೆ ಮಹಿಳಾ ಪ್ರಯಾಣಿಕರೊಂದಿಗೆ ಯಾವುದೇ ರೀತಿಯಲ್ಲಿ ಅಗೌರವದಿಂದ ನಡೆದುಕೊಳ್ಳುವ ಪ್ರಕರಣಗಳು ವರದಿಯಾದಲ್ಲಿ, ಸಂಬAಧಪಟ್ಟ ಚಾಲಕ ಮತ್ತು ನಿರ್ವಾಹಕರ ಮೇಲೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *