ನವದೆಹಲಿ : ರಾಜ್ಯದಲ್ಲಿ ಧರ್ಮದಂಗಲ್‌ಗೆ ಮೂಲ ಕಾರಣವಾಗಿದ್ದ ಹಿಜಾಬ್ ವಿಚಾರವನ್ನು ವಿಚಾರಣೆ ಮಾಡಲು ಒಪ್ಪಿಕೊಂಡಿದ್ದ ಸುಪ್ರೀಂ ಕೋರ್ಟ್, ಈಗ ದಿನಾಂಕ ನಿಗದಿ ಮಾಡಿದೆ. ಹೋಳಿ ಹಬ್ಬದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್ ಕೇಸ್‌ನ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಮಾರ್ಚ್ 9 ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ತುರ್ತಾಗಿ ವಿಚಾರಣೆ ನಡೆಸುವಂತೆ ವಕೀಲರು ಪ್ರಸ್ತಾಪ ಮಾಡಿದ್ದರು. ಅದರೆ, ಇದಕ್ಕೆ ನೀವು ತಡವಾಗಿ ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದು ಸಿಜೆಐ ಉತ್ತರ ನೀಡಿದ್ದರು. ಎರಡು ಬಾರಿ ಪೀಠದ ಮುಂದೆ ಪ್ರಸ್ತಾಪ ಮಾಡಿರುವುದಾಗಿ ವಕೀಲರು ಹೇಳಿಕೆ ನೀಡಿದ್ದರೂ, ಮಾಚ್೯ 17ರ ನಂತರದ ದಿನಗಳಲ್ಲಿ ಮುಂದಿನ ವಿಚಾರಣೆ ನಡೆಸಲಿದ್ದೇವೆ ಎಂದು ಸಿಜೆಐ ತಿಳಿಸಿದ್ದಾರೆ.
ಈ ಹಿಂದೆಯೇ ಹಲವು ಬಾರಿ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರಿ ಕೆಲ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು, ಆದರೆ ಸುಪ್ರೀಂ ಕೋರ್ಟ್ ಇನ್ನೂ ಈ ಬಗ್ಗೆ ಅದೇಶ ನೀಡಿಲ್ಲ. ಈ ನಿಟ್ಟಿನಲ್ಲಿ ಮಾರ್ಚ್ 9 ರಿಂದ ಆರಂಭಗೊಳ್ಳುವ ಪರೀಕ್ಷೆಯಲ್ಲಿ ದ್ವಿತೀಯ ಪಿಯುಸಿ ಶಾಲಾ, ಕಾಲೇಜುಗಳ ಸಮವಸ್ತ್ರ ನಿಯಮದಲ್ಲಿ ಹಿಜಾಬ್‌ಗೆ ವಿನಾಯಿತಿ ನೀಡಬಹುದೇ, ಇಲ್ಲವೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ವಿಚಾರಣೆ ನಡೆಸಲಾಗುತ್ತಿದೆ. ಪರೀಕ್ಷೆಗೆ ಹಾಜರಾಗುವಾಗ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಹೋಳಿ ಹಬ್ಬದ ನಂತರ ಪೀಠವನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ತಿಳಿಸಿದೆ.
ಆದ್ದರಿಂದ 2022ರಂತೆಯೇ ಈ ಬಾರಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡದಿರಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಬಿ. ಸಿ. ನಾಗೇಶ್ ಪರೀಕ್ಷೆಗೆ ಹಿಜಾಬ್ ಧರಿಸಿ ಬರುವವರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಆ ಕಾರಣದಿಂದ ಮುಂದೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ ಗೆ ಹಿಜಾಬ್ ಧರಿಸಿ ಬರೆಯುವಂತಿಲ್ಲ ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.