ಕಾರ್ಕಳ:ಮುಂಡ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದ ಪರಿಣಾಮವಾಗಿ ಇದೀಗ ಬಿಜೆಪಿ ಬೆಂಬಲಿತ ಪಂಚಾಯಿತಿ ಸದಸ್ಯ ಹಾಗೂ ಬಿಲ್ಲವ ಸಮುದಾಯದ ಪ್ರಭಾವಿ ಮುಖಂಡ ಕರಿಯ ಪೂಜಾರಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಈ ಬಾರಿಯ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕರಿಯ ಪೂಜಾರಿ ಆಕಾಂಕ್ಷಿಯಾಗಿದ್ದರು ಆದರೆ ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಯಾಗಿ ದೇವಪ್ಪ ಸಫಲಿಗ ಅವರನ್ನು ಪಕ್ಷದ ನಾಯಕರು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಕರಿಯ ಪೂಜಾರಿ ಪತ್ರಿಕಾಗೋಷ್ಠಿ ನಡೆಸಿ ಅಸಮಾಧಾನ ಹೊರಹಾಕಿದ್ದರು ಕಳೆದ 30 ವರ್ಷಗಳಿಂದ ಬಿಜೆಪಿಯ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತನಾಗಿದ್ದು ನನ್ನ ಅನುಭವ ಹಾಗೂ ಹಿರಿತನಕ್ಕೆ ಮುಖಂಡರು ಗೌರವ ಕೊಡದೇ ನನ್ನನ್ನು ಅವಮಾನಿಸಿದ್ದಾರೆಂದು ಆರೋಪಿಸಿದ್ದರು.
ಇದೀಗ ಕರಿಯ ಪೂಜಾರಿಯವರು ಬಿಜೆಪಿ ತೊರೆದು ಕಾರ್ಕಳ ಕಾಂಗ್ರೆಸ್ ಮುಖಂಡ ಉದಯಶೆಟ್ಟಿ ಮುನಿಯಲು ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಭಾನುವಾರ ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಿಯ ಪೂಜಾರಿಯವರನ್ನು ಪಕ್ಷದ ನಾಯಕರು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ, ಹಿಂದುಳಿದ ವರ್ಗದ ಉಪಾಧ್ಯಕ್ಷರಾದ ಡಿ. ಆರ್. ರಾಜು,ಜಿಲ್ಲಾ ವಕ್ತರರಾದ ಬಿಪಿನ್ ಚಂದ್ರಪಾಲ್, ಸುಧಾಕರ್ ಕೋಟ್ಯಾನ್,ಸುಭೋದ್ ಶೆಟ್ಟಿ, ಪ್ರಭಾಕರ್ ಬಂಗೇರ, ಮುಂತಾದವರು ಉಪಸ್ಥಿತರಿದ್ದರು.