ಕಾರ್ಕಳ : ಸೇವೆಗೆ ಇನ್ನೊಂದು ಹೆಸರು ಸಹಕಾರ ಕ್ಷೇತ್ರ. ಇಲ್ಲಿ ಗ್ರಾಮೀಣ ಭಾಗದ ಸಾಮಾನ್ಯ ಜನರೂ ಪ್ರಯೋಜನ ಪಡೆದುಕೊಳ್ಳುವುದು ಸುಲಭ ಸಾಧ್ಯ ಎಂದು ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ .ಎನ್ ರಾಜೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ಮುಂಡ್ಕೂರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಸಮೃದ್ಧಿ ಸಹಕಾರ ಸೌಧದ ಹವಾನಿಯಂತ್ರಿತ ಬ್ಯಾಂಕಿಂಗ್ ಕಚೇರಿಯನ್ನು ಉದ್ಘಾಟಿಸಿ, ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರ ಸಂಸ್ಥೆಗಳು ವಿಕಸನಗೊಂಡು ಗ್ರಾಮೀಣ ಭಾಗದಲ್ಲಿ ಸೇವೆ ನೀಡುತ್ತಿವೆ. ಸಹಕಾರ ಕ್ಷೇತ್ರದಿಂದಾಗಿ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ನಾವು ಜನರ ಬಳಿ ಹೋಗಿ ಸೇವೆ ನೀಡಿದಾಗ ಮಾತ್ರ ಒಂದು ಸಂಸ್ಥೆ ಯಶಸ್ಸನ್ನು ಕಾಣಲು ಸಾಧ್ಯ. ಕಳೆದ 27 ವರ್ಷಗಳಿಂದ ರೈತರಿಗೆ ನೀಡಿದ ಕೃಷಿ ಸಾಲವನ್ನು ಶೇ.100 ರಷ್ಟು ವಸೂಲಾತಿ ಮಾಡಿರುವ ಕೀರ್ತಿ ನಮ್ಮ ಜಿಲ್ಲೆಗೆ ಇದೆ ಎಂದರು.
ಸಂಘದ ವಿಸ್ತರಣಾ ಕಟ್ಟಡ ಸಮೃದ್ಧಿ ಸಹಕಾರಿ ಸೌಧವನ್ನು ಇಂಧನ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಿದರು.

ಗೃಹಬಳಕೆ ವಿಭಾಗವನ್ನು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ರಾಮದಾಸ್ ಆಚಾರ್ಯ, ನವೋದಯ ಸಹಕಾರಿ ಭವನವನ್ನು ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ವಾದಿರಾಜ ಶೆಟ್ಟಿ, ಭದ್ರತಾ ಕೊಠಡಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಬೆಳಪು, ರಸಗೊಬ್ಬರ ವಿಭಾಗವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಪಡಿತರ ವಿಭಾಗವನ್ನು ದ. ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಹಾಗೂ ಆಡಳಿತ ಕಚೇರಿಯನ್ನು ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಎನ್. ಎಸ್. ಶೆಟ್ಟಿ ಉದ್ಘಾಟಿಸಿದರು.



