ಕಾರ್ಕಳ: ಜಾರ್ಕಳ ಪುರಸಭೆಗೆ ನೀರುಪೂರೈಸುವ ಜಲಾಶಯದ ಪಕ್ಕದಲ್ಲಿ ಜಿವಿಪಿ ಇನ್‌ಫ್ರಾ ಪ್ರಾಜೆಕ್ಟ್ ಎಂಬ ಕಂಪೆನಿ ಜಲವಿದ್ಯುತ್ ಉತ್ಪಾದನೆ ಮಾಡುತ್ತಿದ್ದು ಈ ಘಟಕವನ್ನು ವಿಸ್ತರಿಸುವ ಉದ್ದೇಶದಿಂದ ನಿಯಮಬಾಹಿರವಾಗಿ ಕಲ್ಲು ಬಂಡೆಗಳನ್ನು ಸ್ಪೋಟಿಸುತ್ತಿದ್ದು ಇದರಿಂದ ಮುಂಡ್ಲಿ ಭಾಗದ ನೂರಾರು ಜನರಿಗೆ ತೀವೃ ತೊಂದರೆಯಾಗುತ್ತಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಶುಕ್ರವಾರ ಮುಂಡ್ಲಿ ಭಾಗದ ತೊಂದರೆಗೊಳಗಾದ ಮನೆಗಳು ಹಾಗೂ ಕೃಷಿ ಜಮೀನುಗಳನ್ನು ಪರಿಶೀಲಿಸಿದರು.
ಜಿವಿಪಿ ಇನ್‌ಫ್ರಾ ಪ್ರಾಜೆಕ್ಟ್ ಕಂಪೆನಿ 30 ವರ್ಷಗಳ ಅವಧಿಗೆ ಮುಂಡ್ಲಿ ಕಿರು ಜಲವಿದ್ಯುತ್ ಸ್ಥಾವರ ಸರ್ಕಾರದ ಜತೆಗೆ ಕರಾರಿನ ಮೂಲಕ ಗುತ್ತಿಗೆ ಪಡೆದು ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಆದರೆ ವಿದ್ಯುತ್ ಉತ್ಪಾದನೆಗೆ ನೀರಿನ ಹರಿವಿನ ವೇಗ ಹೆಚ್ಚಿಸಲು ಕಲ್ಲುಗಳನ್ನು ಸ್ಪೋಟ ನಡೆಸಲು ಕಂಪೆನಿ ಮುಂದಾಗಿದೆ. ಕಂಪೆನಿಯು ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಸ್ಪೋಟ ನಡೆಸುತ್ತಿರುವ ಪರಿಣಾಮ ಮುಂಡ್ಲಿ ಭಾಗದ ನೂರಾರು ಮನೆಗಳ ಗೋಡೆ,ಕಾಂಕ್ರೀಟ್ ಸ್ಲಾö್ಯಬ್ ಬಿರುಕು ಬಿಟ್ಟಿದ್ದು, ಸುತ್ತಲಿನ ಹತ್ತಾರು ಎಕರೆ ಕೃಷಿ ಭೂಮಿಗೂ ಹಾನಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿದ್ಯುತ್ ಉತ್ಪಾದನಾ ಘಟಕದ ವಿಸ್ತರಣೆಗೆ ಕಂಪೆನಿ ಯಾವುದೇ ಅನುಮತಿ ಪಡೆಯದೇ ಕಲ್ಲುಬಂಡೆಗಳನ್ನು ಸ್ಪೋಟಿಸುತ್ತಿದ್ದು ಇದರಿಂದ ಗ್ರಾಮಸ್ಥರಿಗೆ ತೀವೃ ತೊಂದರೆಯಾಗುತ್ತಿದೆ, ಇದಲ್ಲದೇ ಕಾರ್ಕಳ ಪುರಸಭೆಗೆ ಕುಡಿಯುವ ನೀರು ಪೂರೈಸುವ ಮುಂಡ್ಲಿ ಜಲಾಶಯ ಹಾಗೂ ಸಂಪರ್ಕ ಸೇತುವೆಯೂ ಕೂಡ ಪಕ್ಕದಲ್ಲೇ ಇದ್ದು,ಇಲ್ಲಿ ಸ್ಪೋಟ ನಡೆಸುವಂತಿಲ್ಲ ಎನ್ನುವ ನಿಯಮವಿದೆ.ಆದರೂ ಕಂಪೆನಿ ಎಲ್ಲಾ ನಿಯಮಗಳನ್ನು ಗಾಳಿಗೆತೂರಿ, ಪರವಾನಿಗೆ ನವೀಕರಿಸದೇ ಕಲ್ಲುಬಂಡೆ ಸ್ಪೋಟ ನಡೆಸುತ್ತಿದೆ,ಇದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.
ನಾಳಿನ ಫಲಿತಾಂಶದ ಕುರಿತು ಮಾತನಾಡಿದ ಮುತಾಲಿಕ್, ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ, ನನ್ನದು ಹೋರಾಟವೇ ಜೀವನ,ಸೋಲು ನನಗೆ ಹೊಸತಲ್ಲ, ಸಾಕಷ್ಟು ಬಾರಿ ಸೋತಿದ್ದೇನೆ,ಚುನಾವಣೆಯ ಬಳಿಕವೂ ಕಾರ್ಕಳ ಕ್ಷೇತ್ರದಲ್ಲೇ ಉಳಿದುಕೊಂಡು ದಬ್ಬಾಳಿಕೆ, ಭ್ರಷ್ಟಾಚಾರ ಹಾಗೂ ಅಕ್ರಮಗಳ ವಿರುದ್ಧ ನಿರಂತರ ಹೋರಾಟ ನಡೆಸುವ ಮೂಲಕ ಮುತಾಲಿಕ್ ಚುನಾವಣೆ ಬಳಿಕ ಓಡಿಹೋಗುತ್ತಾರೆ ಎಂದು ವ್ಯಂಗ್ಯವಾಡಿದ್ದ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.

