ಅಜೆಕಾರು : ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಮುಂಡ್ಲಿ ಎಂಬಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
ಜಾರ್ಕಳ- ಮುಂಡ್ಲಿಯ ನಾರಾಯಣ ಗುರು ಕಾಲೋನಿ ನಿವಾಸಿ ಜಯ ಪೂಜಾರಿ (48 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಅವರು ಬುಧವಾರ (ಜ.18) ಬೆಳಿಗ್ಗೆ ಮನೆಯಿಂದ ಅಂಗಡಿಗೆ ವೀಳ್ಯದೆಲೆ ಖರೀದಿಸಲೆಂದು ಹೋದವರು ಮಧ್ಯಾಹ್ನವಾದರೂ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಅವರ ಪತ್ನಿ ರಮಣಿ ತನ್ನ ಸಹೋದರ ಕರುಣಾಕರ ಪೂಜಾರಿ ಅವರಿಗೆ ಪತಿ ನಾಪತ್ತೆಯಾಗಿರುವ ವಿಚಾರ ತಿಳಿಸಿ ಅವರೊಂದಿಗೆ ಸೇರಿ ಹುಡುಕಾಡಿದಾಗ ಇಂದು ಬೆಳಿಗ್ಗೆ ಬೆಳ್ಸಾರ್ ಬೆಟ್ಟು ನರ್ಸರಿ ಎಂಬಲ್ಲಿ ಜಯ ಪೂಜಾರಿ ಅವರ ಶವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿಪರೀತ ಮದ್ಯಪಾನದ ಚಟ ಹೊಂದಿದ್ದ ಜಯ ಪೂಜಾರಿ ಅವರು ಕಳೆದ ಏಳು ತಿಂಗಳಿನಿಂದ ಮಧ್ಯಪಾನ ಸೇವಿಸುವುದನ್ನು ನಿಲ್ಲಿಸಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕರುಣಾಕರ ಪೂಜಾರಿ ಅಜೆಕಾರು ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ