Share this news

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಈವರೆಗೂ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲವಾಗಿತ್ತು.

ಇದೀಗ ಬಿಜೆಪಿ ಹೈಕಮಾಂಡ್ ಕೊನೆಗೂ ರಾಜ್ಯಾಧ್ಯಕ್ಷ ಪಟ್ಟಕ್ಕೆ ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೇ ನೆನೆಗುದಿಗೆ ಬಿದ್ದಿದ್ದ ವಿಪಕ್ಷ ನಾಯಕನ ಹುದ್ದೆಗೂ ನೇಮಕ ಮಾಡುವ ಕುರಿತು ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ನೀಡಿದ್ದು ಮುಂದಿನ ನವೆಂಬರ್ 17ರಂಸು ಶುಕ್ರವಾರವೇ ವಿಪಕ್ಷ ನಾಯಕನ ಆಯ್ಕೆ ಮಾಡಲಾಗುವುದೆಂದು ಹೇಳಿದ್ದಾರೆ.ವಿಧಾನಸಭಾ ಚುನಾವಣೆ ಬಳಿಕ ಖಾಲಿಯಾಗಿದ್ದ ವಿಪಕ್ಷ ಸ್ಥಾನದ ಆಯ್ಕೆ ಕಗ್ಗಂಟ್ಟಾಗಿತ್ತು. ಹಲವು ಸುತ್ತಿನ ಮಾತುಕತೆ, ಚರ್ಚೆ ನಡುವೆಯೂ ರಾಜ್ಯಾಧ್ಯಕ್ಷರ ಆಯ್ಕೆ ವಿಳಂಬವಾಗಿತ್ತು. ಅಳೆದು ತೂಗಿ ಬಿಜೆಪಿ ಹೈಕಮಾಂಡ್, ಬಿಎಸ್ ಯಡಿಯೂರಪ್ಪ ಪುತ್ರ, ಶಾಸಕ ಬಿವೈ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ ನೀಡಿದೆ. ನೂತನ ಜವಾಬ್ದಾರಿ ವಹಿಸಿಕೊಂಡ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಬಿವೈ ವಿಜಯೇಂದ್ರ, ಮುಂದಿನ ಶುಕ್ರವಾರವೇ ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ ಎಂದು ಘೋಷಿಸಿದ್ದಾರೆ.

ಮುಂದಿನ ಶುಕ್ರವಾರ ನವೆಂಬರ್ 17ರಂದು ಕೇಂದ್ರದಿಂದ ವೀಕ್ಷಕರು ರಾಜ್ಯಕ್ಕೆ ಆಗಮಿಸುತ್ತಾರೆ. ಇದೇ ದಿನ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಎಲ್ಲಾ ನಾಯಕರು, ಹಿರಿಯರ ಅಭಿಪ್ರಾಯ ಸಂಗ್ರಹಿಸಿ ವಿಪಕ್ಷ ನಾಯಕನ ಆಯ್ಕೆ ಅಂತಿಮಗೊಳಿಸಲಾಗುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ. ವಿಪಕ್ಷ ನಾಯಕನಿಲ್ಲದೆ ಬಿಜೆಪಿ ತೀವ್ರ ಮುಜುಗರ ಅನುಭವಿಸಿತ್ತು.
ಸದನದಲ್ಲಿ ವಿಪಕ್ಷ ನಾಯಕನಿಲ್ಲದ ಬಿಜೆಪಿ ಮೇಲೆ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದರು. ಇನ್ನು ಚುನಾವಣೆ ಫಲಿತಾಂಶದ ಬಳಿಕ ಇಲ್ಲಿಯವರೆಗೂ ಬಿಜೆಪಿ ನಾಯಕರನ್ನು ವಿಪಕ್ಷ ನಾಯಕನಿಲ್ಲದ ಹಡಗು ಎಂದು ತಿವಿದಿದ್ದರು. ಇತ್ತ ಬಿಜೆಪಿ ಹಿರಿಯ ನಾಯಕರು ವಿಪಕ್ಷ ನಾಯಕನ ವಿಳಂಬದಿಂದ ಮುಜುಗರ ಅನುಭವಿಸಿರುವುದನ್ನೂ ಒಪ್ಪಿಕೊಂಡಿದ್ದರು. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಮಹತ್ವದ ಘೋಷಣೆ ಮಾಡುವ ಮೂಲಕ ವಿಪಕ್ಷ ನಾಯಕನ ಕಾಯುವಿಕೆಗೆ ಅಂತ್ಯಹಾಡಿದ್ದಾರೆ.

ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ಎದುರಾಗಿದೆ. ಕಾರಣ ಈ ಹಿಂದಿನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ರನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸದೇ ಕಡೆಗಣಿಸಿತ್ತು. ಕಟೀಲ್ ಪಾಲಿಟಿಕಲ್ ಜೋಕರ್ ಎಂದು ಕಾಂಗ್ರೆಸ್ ಬಿಂಬಿಸಿತ್ತು. ಈ ಮೂಲಕ ಬಿಜೆಪಿ ದೌರ್ಬಲ್ಯವನ್ನು ಕಾಂಗ್ರೆಸ್ ಲಾಭವಾಗಿ ಪರಿವರ್ತಿಸಿತ್ತು. ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಕಾಂಗ್ರೆಸ್‌ಗೆ ಲಘುವಾಗಿ ಪರಿಗಣಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಬಲ ಸಮುದಾಯದ ಯಡಿಯೂರಪ್ಪ ಬೆನ್ನಿಗೆ ಇರುವುದರಿಂದ ಕಾಂಗ್ರೆಸ್ ಗೆ ಪೈಪೋಟಿ ಎದುರಿಸುವುದು ಸಹಜವಾಗಿದೆ. ಇನ್ನು ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಣಣ್ ಸವದಿ ಸೇರಿದಂತೆ ಕೆಲ ಲಿಂಗಾಯಿತ ನಾಯಕರ ಕಡೆಗಣಿಸಲಾಗಿದೆ ಅನ್ನೋ ಆರೋಪವನ್ನು ಕಾಂಗ್ರೆಸ್ ಹಬ್ಬಿಸಿ ಯಶಸ್ವಿಯಾಗಿತ್ತು. ಇದೀಗ ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ನೀಡುವ ಮೂಲಕ ಮತ್ತೆ ಲಿಂಗಾಯಿತ ಮತಗಳನ್ನು ಬಿಜೆಪಿ ಕ್ರೋಢೀಕರಿಸಿದೆ. ಪ್ರಬಲ ಸಮುದಾಯದ ಯಡಿಯೂರಪ್ಪ ಬೆನ್ನಿಗೆ ಇರುವುದರಿಂದ ಕಾಂಗ್ರೆಸ್ ಪೈಪೋಟಿ ಎದುರಿಸುವುದು ಸಹಜ.

ಇತ್ತ ಕಾಂಗ್ರೆಸ್ ಲಿಂಗಾಯಿತರನ್ನು ಕಡೆಗಣಿಸುತ್ತಿದೆ ಅನ್ನೋ ಆರೋಪವನ್ನು ಇದೀಗ ಬಿಜೆಪಿ ಪ್ರಬಲವಾಗಿ ಎತ್ತಿಕೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ತನ್ನ ತಂತ್ರಗಾರಿಕೆ ಬದಲಿಸಿದರೂ ಅಚ್ಚರಿಯಿಲ್ಲ.

 

 

 

 

 

 

 

 

Leave a Reply

Your email address will not be published. Required fields are marked *