ಬೆಳಗಾವಿ:ಆಸ್ತಿಯ ಮಾರ್ಗಸೂಚಿ ದರ ಹೆಚ್ಚಳದ ಬೆನ್ನಲ್ಲೇ, ಮುದ್ರಾಂಕ ಶುಲ್ಕ ಏರಿಕೆ ಕುರಿತಂತೆ ಸರ್ಕಾರ ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕವನ್ನು ಮಂಡಿಸಿದೆ.
ಕೆಲ ದಿನಗಳ ಹಿಂದಷ್ಟೇ ಭೂಮಿಯ ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಮುದ್ರಾಂಕ ಶುಲ್ಕ ಹೆಚ್ಚಿಸಲು ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಗುರುವಾರದಂದು ವಿಧಾನಸಭೆಯಲ್ಲಿ ಮಂಡಿಸಿದೆ. ಕಂದಾಯ ಸಚಿವರ ಪರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ, ಅಂಗೀಕಾರಕ್ಕೆ ಸದನವನ್ನು ಕೋರಿದರು.
ಈ ತಿದ್ದುಪಡಿ ವಿಧೇಯಕದ ಪ್ರಕಾರ ಭೂಮಿ ಶುದ್ಧ ಕ್ರಯ ಪತ್ರ, ಬಾಡಿಗೆ, ಚೀಟಿ ಒಪ್ಪಂದ, ಸಾಲದ ಒಪ್ಪ, ಬ್ಯಾಂಕ್ ಗ್ಯಾರಂಟಿ ಮತ್ತಿತರ ದಾಖಲೆಗಳ ನೋಂದಣಿ ಮತ್ತು ಮನೆಗಳ ಬಾಡಿಗೆ ಕರಾರು, ಗುತ್ತಿಗೆ ಕರಾರು, ಬ್ಯಾಂಕ್ ಸಾಲದ ದಾಖಲೆಗಳ ದರ ಹೆಚ್ಚಳವಾಗಲಿದೆ.ತಿದ್ದುಪಡಿ ವಿಧೇಯಕ ಮಂಡನೆಯ ಬಳಿಕ, ಉಭಯ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡರೇ, ರಾಜ್ಯದ ಜನತೆಗೆ ಸ್ಟಾಂಪ್ ಶುಲ್ಕ ಹೆಚ್ಚಳದ ಹೊರೆ ಬೀಳಲಿದೆ.
ಯಾವ ಪ್ರಕಾರದ ಶುಲ್ಕ ಹೆಚ್ಚಳವಾಗಲಿದೆ?
ದತ್ತು ಡೀಡ್ ದರ ರೂ.500 ರಿಂದ 1000ಕ್ಕೆ ಹೆಚ್ಚಳವಾಗಲಿದೆ. ಪ್ರಮಾಣಪತ್ರ ಶುಲ್ಕ ರೂ.20ರಿಂದ 100 ಹೆಚ್ಚಳ
10 ಲಕ್ಷದವರೆಗಿನ ಒಪ್ಪಂದದ ಶುಲ್ಕ ರೂ.100 ರಿಂದ 500ಕ್ಕೆ ಏರಿಕೆ, 1 ಲಕ್ಷದವರೆಗಿನ ಚಿಟ್ ಒಪ್ಪಂದದ ದರ ರೂ.100 ರಿಂದ 500ಕ್ಕೆ ಹೆಚ್ಚಳ, ಸಾಲ ಶೇ.01 ರಿಂದ ಶೇ.0.5ಗೆ ಏರಿಕೆ, 1000 ಬಾಂಡ್ ಗೆ ರೂ.100 ರಿಂದ 200 ಶುಲ್ಕ ಹೆಚ್ಚಳ, ಪವರ್ ಆಫ್ ಅಟಾರ್ನಿಗೆ ರೂ.100 ರಿಂದ 500 ಶುಲ್ಕ ಹೆಚ್ಚಳವಾಗಲಿದೆ.