ಹೆಬ್ರಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜನ ನೀಡಲು ಶಾಂತಿನಿಕೇತನ ಯುವವೃಂದವು ವಿದ್ಯಾರ್ಥಿಗಳಿಗೆ ಜ್ಞಾನ ಸ್ಫೂರ್ತಿ ರಸಪ್ರಶ್ನೆ ಕಾರ್ಯಕ್ರಮ ಮಾಡಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುತ್ತಿರುವುದು ಅವರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ಇಲ್ಲಿ ಸಿಕ್ಕ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮುನಿಯಾಲು ಲಯನ್ಸ್ ಕ್ಲಬ್ ಕಾರ್ಯದರ್ಶಿ ಹಾಗೂ ಉದ್ಯಮಿಯಾದ ಗೋಪಿನಾಥ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅವರು ಮುನಿಯಾಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ಶಾಂತಿನಿಕೇತನ ಯುವವೃಂದ, ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘ ಕುಡಿಬೈಲ್ ಕುಚ್ಚೂರು, ನೆಹರು ಯುವ ಕೇಂದ್ರದ ಜಂಟಿ ಆಶ್ರಯದಲ್ಲಿ ಮುನಿಯಾಲು ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಶಾಂತಿನಿಕೇತನ ಜ್ಞಾನ ಸ್ಫೂರ್ತಿ 27ನೇ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಗಮನವಿಟ್ಟು ಅಭ್ಯಾಸ ಮಾಡಿದಾಗ ಕೆಲಸ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ನಾವು ಕೆಲಸವನ್ನು ಹುಡುಕಿಕೊಂಡು ಹೋದರೆ ನಮಗೆ ಸಿಗುವ ವೇತನದಿಂದ ತೃಪ್ತಿ ಸಿಗುವುದಿಲ್ಲ. ಪಿಯುಸಿಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿ ಪದವಿಯಲ್ಲಿ ಅದಕ್ಕೆ ಇನ್ನೂ ಹೆಚ್ಚಿನ ಒತ್ತುಕೊಟ್ಟರೆ ಖಂಡಿತ ಉತ್ತಮ ಸರಕಾರಿ ನೌಕರಿ ಪಡೆಯಲು ಸಾಧ್ಯ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಅಗತ್ಯ ಇದ್ದಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಕೂಡ ನೀಡಲಾಗುವುದೆಂದು ಗೋಪಿನಾಥ್ ಭಟ್ ಹೇಳಿದರು.

ಶಾಂತಿನಿಕೇತನ ಸಂಸ್ಥಾಪಕ ರಾಜೇಶ್ ಪ್ರಾಸ್ತವಿಕವಾಗಿ ಮಾತನಾಡಿ, ವಿದ್ಯಾರ್ಥಿಗಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಂತಿನಿಕೇತನ ಜ್ಞಾನ ಸ್ಫೂರ್ತಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ .ಉಡುಪಿ ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳಾಗಬೇಕೆನ್ನುವ ಮಹಾದಾಸೆ ಇದೆ. ಆ ನಿಟ್ಟಿನಲ್ಲಿ 27 ಸಂಚಿಕೆಯನ್ನು ಆರ್ಥಿಕ ಸಹಕಾರದ ಮೂಲಕ ಮಾಡಿದ್ದೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಮಂಜುನಾಥ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಬದ್ಧತೆ,ಶಿಸ್ತು, ಏಕಾಗ್ರತೆ, ಸಂಯಮ, ಛಲ ಇದ್ದಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುತ್ತಾರೆ. ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡು ಮುAದಿನ ದಿನಗಳಲ್ಲಿ ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಅಧಿಕಾರಿಗಳು ಆಗಬೇಕು ಎಂದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಶ್ವೇಶ್ವರ ಗಾಂವ್ಕರ್, ಉಪನ್ಯಾಸಕ ದತ್ತ ಕುಮಾರ್, ಶಾಂತಿನಿಕೇತನದ ಆಡಳಿತ ಮಂಡಳಿ ಸದಸ್ಯ ಸುಧೀರ್ ನಾಯಕ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ದತ್ತ ಕುಮಾರ್ ಸ್ವಾಗತಿಸಿ, ಉಮೇಶ್ ವಂದಿಸಿದರು.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

