ಹೆಬ್ರಿ: ಜಗತ್ತಿಗೆ ಆಯುರ್ವೇದದ ಮೂಲಕ ಆರೋಗ್ಯವನ್ನು ಕರುಣಿಸಿದ ದೇಶ ಭಾರತ, ಆಯುರ್ವೇದ ಪದ್ದತಿಯ ಮೂಲ ನಮ್ಮ ದೇಶವಾಗಿದ್ದರೂ ನಾವಿದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸದಿರುವುದು ದುರಾದೃಷ್ಟ. ನಮ್ಮ ಜಿಲ್ಲೆಯಲ್ಲಿ ಸಾವಿರಾರು ಔಷಧೀಯ ಗುಣಗಳುಳ್ಳ ಸಸ್ಯ ಸಂಕುಲವಿದ್ದು ಆಯುರ್ವೇದಕ್ಕೆ ಅತ್ಯಗತ್ಯವಾಗಿದ್ದು ಇವುಗಳನ್ನು ಂರಕ್ಷಿಸುವ ಕೆಲಸ ಆಗಬೇಕಾಗಿದೆ. ಉಡುಪಿ ಜಿಲ್ಲೆಯನ್ನು ಆಯುರ್ವೇದ ವಲಯವೆಂದು ಘೋಷಿಸಿ ಕೇಂದ್ರ ಸರ್ಕಾರದ ನೆರವಿನಿಂದ ಆಯುರ್ವೇದ ಉದ್ಯಮವನ್ನು ಬೆಳೆಸಲು ಸರಕಾರ ಯತ್ನಿಸಬೇಕು. ವಿಶ್ವಮಾನ್ಯತೆ ಹೊಂದಿರುವ ಆಯುರ್ವೇದದ ಅಧ್ಯಯನಕ್ಕೆ ನಮ್ಮ ಜಿಲ್ಲೆಯಲ್ಲಿ ಒಂದು ಆಯುರ್ವೇದ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದು ಖ್ಯಾತ ಸಾಹಿತಿ ಮುನಿಯಾಲು ಗಣೇಶ ಶೆಣೈ ಒತ್ತಾಯಿಸಿದರು.
ಅವರು ಸೋಮವಾರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲೂಕು ಘಟಕ ವತಿಯಿಂದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧ್ಯಕ್ಷೀಯ ಮಾತುಗಳನ್ನಾಡಿ, ಉದಾತ್ತವಾದ ಚಿಂತನೆಯ ಸಂಸ್ಕೃತಿಯ ದೇಶ ನಮ್ಮದು. ನಮಗೆ ನೆಲ,ಗಾಳಿ, ನೀರು, ಬೆಟ್ಟ ನಿರ್ಜೀವ ವಸ್ತುಗಳೆಲ್ಲ ದೈವೀ ರೂಪಗಳು.ಎಲ್ಲವನ್ನು ಗೌರವಿಸುವ, ಪೂಜಿಸುವ ಪರಂಪರೆ ನಮ್ಮದು. ಇದು ಮನು ಕುಲಕ್ಕೆ ಒಂದು ಮಾದರಿ.ಉಡುಪಿ ಜಿಲ್ಲೆಗೆ ಅತೀ ಅಗತ್ಯವಾದ ವಿಮಾನ ನಿಲ್ದಾಣವನ್ನು ಸರಕಾರ ಆರಂಭಿಸಬೇಕು. ಕನ್ನಡದಲ್ಲಿ ಜಾಗತಿಕ ಮಟ್ಟದ ಸಾಹಿತ್ಯ ಬಂದಿದೆ. ಆದರೆ ಪುಸ್ತಕೋದ್ಯಮ ಮಾತ್ರ ತೀರಾ ಬಡಕಲಾಗಿದೆ. ಸಾಂಘಿಕ ಪ್ರಯತ್ನವಿಲ್ಲದ ಕಾರಣ ಪುಸ್ತಕಗಳು ಜನರ ಕೈಗೆ ಸಿಗುವುದಿಲ್ಲ.ಸರಕಾರಕ್ಕೆ ಗ್ರಂಥಾಲಯ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು.ನನ್ನ ವೃತ್ತಿಗಳ ಅನುಭವವನ್ನು ನಮ್ಮ ಜಿಲ್ಲೆಗೆ ಕೊಡಲು ಸದಾ ಸಿದ್ದನಿದ್ದೇನೆ. ನಾಡು,ನುಡಿ ಬಗ್ಗೆ ತಮ್ಮೆಲ್ಲರ ಜೊತೆ ಶ್ರಮಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ,. ಸಾಹಿತ್ಯದ ಕುರಿತು ಹೆಚ್ಚೆಚ್ಚು ಆಸಕ್ತಿ ನಿರ್ಮಾಣವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಇಷ್ಟು ವ್ಯವಸಸ್ಥಿತವಾಗಿ ಸಾಹಿತ್ಯ ಸಮ್ಮೇಳನ ಈ ಭಾಗದಲ್ಲಿ ನಡೆಯಲಿಲ್ಲ. ನಮ್ಮ ಸರಕಾರ ಸಾಹಿತ್ಯ ಸಂಸ್ಕೃತಿ ಮತ್ತು ಕನ್ನಡ ಭಾಷೆಗೆ ವಿಶೇಷವಾದ ಒತ್ತನ್ನು ನೀಡುತ್ತಿದೆ. ನಮ್ಮ ದೇಶದ ನಾಗರಿಕತೆ ಉಳಿದಿದೆ ಎಂದಾದರೆ ಸಮಾಜದ ಸಾಂಸ್ಕೃತಿಕ ಮತ್ತು ಭಾಷೆಯನ್ನು ಅಳವಡಿಸಿ ಕೊಂಡುದರಿAದ ನಮ್ಮ ಸಂಸ್ಕೃತಿ ಗಟ್ಟಿಯಾಗಿ ಉಳಿದುಕೊಂಡಿದೆ. ಸಮ್ಮೇಳನದ ಉದ್ದೇಶಗಳನ್ನು ಮರೆಯದೆ ನಾಡು ನುಡಿಗಾಗಿ ಶ್ರಮಿಸೋಣ ಎಂದರು.
ಸಾಹಿತ್ಯ ಸಮ್ಮೇಳನದ ಸಭಾಕಾರ್ಯಕ್ರಮವನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳಸಲು ಜನಸಾಮಾನ್ಯರೂ ಕೂಡ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು, ಕನ್ನಡ ಭಾಷೆ ನಮ್ಮ ಅಸ್ಮಿತೆಯಾಗಬೇಕೆಂದರು.
ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಮುನಿಯಾಲು ದಿನೇಶ್ ಪೈ ಪುಸ್ತಕ ಮಳಿಗೆಯನ್ನು ಉದ್ಘಾಟಿಸಿದರು. ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಹೆಬ್ಬಾರ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉದಯ್ ಶೆಟ್ಟಿ ಮುಟ್ಲುಪಾಡಿ ಮತ್ತು ಅರ್ಚನಾ ಸುವರ್ಣ, ಶೈಲಜಾ ಶಿವಪುರ ಇವರಿಂದ ದೇವರ ನಾಮ ಮತ್ತು ಕನ್ನಡ ಭಾವಗೀತೆಗಳ ಗಾಯನ ನಡೆಯಿತು.
ಮುನಿಯಾಲು ಶ್ರೀ ಗದ್ದುಗೆ ಮಾರಿಯಮ್ಮ ದೇವಸ್ಥಾನದಿಂದ ಸಮ್ಮೇಳನಾಧ್ಯಕ್ಷ ಮುನಿಯಾಲು ಗಣೇಶ್ ಶೆಣೈಯವರನ್ನು ಅದ್ದೂರಿಯಾಗಿ ಮೆರವಣಿಗೆಯಲ್ಲಿ ಸಮ್ಮೇಳನಕ್ಕೆ ಕರೆತರಲಾಯಿತು. ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಾಹಿತಿ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಯನ್ನಾಡಿದರು.
ಲೇಖಕರುಗಳಾದ ಮಂಜುನಾಥ ಶಿವಪುರ ಅವರ ಹಕ್ಕಿ ಮತ್ತು ವೇದಾಂತ ಹಾಗೂ ಸವಿತಾ ರತ್ನಾಕರ್ ಪೂಜಾರಿಯವರ ಅದೃಷ್ಟ ರೇಖೆ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಸಾಹಿತಿ ಸಂದ್ಯಾ ಶೆಣೈ, ಮಂಗಳೂರು ಸಂತ ಅಲೋಶಿಯಸ್ ಕಾಲೇಜ್ ಸಹ ಪ್ರಾಧ್ಯಾಪಕ ಮುನಿಯಾಲು ಸುರೇಶ್ ಪೂಜಾರಿ ಮಾತನಾಡಿ ದರು.
ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಹರೀಶ್ ಶೆಟ್ಟಿ ಪಡುಕುಡೂರು, ಸವಿತಾ ರಾಮಕೃಷ್ಣ ಆಚಾರ್ ರವರನ್ನು ಸನ್ಮಾನಿಸಲಾಯಿತು.
ಹೆಬ್ರಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಲೀಲಾವತಿ, ಉದ್ಯಮಿ ಯೋಗೀಶ್ ಭಟ್, ಉದ್ಯಮಿ ಭಾಸ್ಕರ್ ಜೋಯಿಸ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಾ. ಚಂದ್ರಯ್ಯ, ಉಡುಪಿ ಜಿಲ್ಲಾ ಕ. ಸಾ. ಪ.ಸಂಘಟನಾ ಕಾರ್ಯದರ್ಶಿ ಪಿ. ವಿ. ಆನಂದ ಸಾಲಿಗ್ರಾಮ, ಕಾರ್ಕಳ ತಾಲೂಕು ಕ. ಸಾ. ಪ. ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ, ಕ. ರಾ. ಪ್ರಾ. ಶಾಲಾ ಶಿಕ್ಷಕರ ಸಂಘ ಕಾರ್ಕಳ ಶಾಖಾ ಅಧ್ಯಕ್ಷ ರಮಾನಂದ ಶೆಟ್ಟಿ, ಜಿಲ್ಲಾ ಕ. ಸಾ. ಪ. ಗೌರವ ಕೋಶಾಧ್ಯಕ್ಷ ಮನೋಹರ್. ಪಿ, ಜಿಲ್ಲಾ ಕ. ಸಾ. ಪ. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂಚಾಲಕಿ ಜ್ಯೋತಿ ಹರೀಶ್, ಮೊದಲಾದವರು ಉಪಸ್ಥಿತರಿದ್ದರು.
ಉದ್ಯಮಿ ಮುನಿಯಾಲು ದಿನೇಶ್ ಪೈ ಸ್ವಾಗತಿಸಿದರು. ಮಂಜುನಾಥ್ ಶಿವಪುರ ವಂದಿಸಿದರು. ಪ್ರಕಾಶ್ ಪೂಜಾರಿ , ಸುಹಾಸ್ ಶೆಟ್ಟಿ ಮುಟ್ಲುಪಾಡಿ, ರಂಜಿತಾ ನಿರೂಪಿಸಿದರು.